ADVERTISEMENT

ಕ್ರಿಯಾಶೀಲ ಸದಸ್ಯರಿಗೆ ಮನ್ನಣೆ: ರಾಜು ಜವಳಕರ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 3:46 IST
Last Updated 4 ಜುಲೈ 2022, 3:46 IST
ಕಲಬುರಗಿಯಲ್ಲಿ ಭಾನುವಾರ ನಡೆದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಅಧ್ಯಕ್ಷರಾಗಿ ಅಯ್ಕೆಯಾದ ರಾಜು ಬಿ. ಜವಳಕರ್‌ ಅವರನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಎಸ್‌. ಅಪ್ಪ ಸನ್ಮಾನಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಇದ್ದರು
ಕಲಬುರಗಿಯಲ್ಲಿ ಭಾನುವಾರ ನಡೆದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಅಧ್ಯಕ್ಷರಾಗಿ ಅಯ್ಕೆಯಾದ ರಾಜು ಬಿ. ಜವಳಕರ್‌ ಅವರನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಎಸ್‌. ಅಪ್ಪ ಸನ್ಮಾನಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಇದ್ದರು   

ಕಲಬುರಗಿ: ‘ಭಾವಸಾರ ಕ್ಷತ್ರಿಯ ಸಮಾಜಕ್ಕಾಗಿ ಕ್ರಿಯಾಶೀಲರಾಗಿ ದುಡಿಯುವ ಸದಸ್ಯರನ್ನು ಗುರುತಿಸಿ ಅವರಿಗೆ ಮಹಾಸಭಾದಲ್ಲಿ ಗುರುತರವಾದ ಹುದ್ದೆಗಳನ್ನು ನೀಡಲಾಗುವುದು’ ಎಂದು ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷ ರಾಜು ಬಿ.ಜವಳಕರ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಅಧ್ಯಕ್ಷರ ಹಾಗೂ ವಿವಿಧ ರಾಜ್ಯಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಮಹಾಸಭಾವನ್ನು ಎಲ್ಲಾ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಲು ಸಂಘಟನೆ ಯಲ್ಲಿಸಕ್ರಿಯವಾಗಿ ತೊಡಗಿಸಿಕೊಳ್ಳುವ ಕಾರ್ಯನಿರತ ಸದಸ್ಯರ ಅಗತ್ಯವಿದೆ. ರಾಜ್ಯಗಳ ಅಧ್ಯಕ್ಷರು ಅಂತಹವರನ್ನು ಹುಡುಕಿ ಸಂಘಟನೆಯ ಜವಾಬ್ದಾರಿ ಕೊಡಬೇಕು. ನಮಗೆ ತನು, ಮನ, ಧನದಿಂದ ಕೆಲಸ ಮಾಡುವ ಸದಸ್ಯರು ಬೇಕಿದೆ’ ಎಂದರು.

ADVERTISEMENT

‘ತುಂಬ ಜನರು ಕುರ್ಚಿಗಾಗಿ ಸಂಘಟನೆಗೆ ಬರುತ್ತಾರೆ. ಅಂತಹವರಿಂದ ಯಾವುದೇ ಪ್ರಯೋಜನೆ ಇಲ್ಲ. ಸದಸ್ಯತ್ವ ನೀಡುವಾಗಅಧ್ಯಕ್ಷರು ಮುಂದೆ ನಿಂತು ಅವರ ಸಾಮರ್ಥ್ಯ, ಇಚ್ಛೆಯನ್ನು ತಿಳಿದುಕೊಳ್ಳಬೇಕು. ಸಂಘಟನೆಯಲ್ಲಿ ಯಾವ ಹುದ್ದೆಗೆ ಅವರು ಅರ್ಹರು ಎಂಬುದು ನಿಮಗೇ ಅರ್ಥವಾಗುತ್ತದೆ’ ಎಂದು ಸೂಚಿಸಿದರು.

‘ಮಹಾಸಭಾಗೆ ಯುವಪಡೆ, ಮಹಿಳಾ ಘಟಕ ಮತ್ತು ಪದವಿ ಘಟಕಗಳು ಬಹುಮುಖ್ಯವಾದ ಅಂಗ. ಯುವಕರಿಗೆ ಹೆಚ್ಚಿನ ಸಂಘಟನೆಯ ಕೆಲಸ ನೀಡಿ, ಅವರಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವುದು ನಮ್ಮ ಕೆಲಸ’ ಎಂದು ಅವರು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಎಸ್‌. ಅಪ್ಪ ಮಾತನಾಡಿ, ‘ಭಾವಸಾರ ಕ್ಷತ್ರಿಯ ಸಮಾಜದವರು ತುಂಬ ಶ್ರಮ ಜೀವಿಗಳು. ನಿಮ್ಮ ಶ್ರಮದಿಂದಾಗಿ ಸಮಾಜಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿದೆ. ನಿಮ್ಮ ಸಮಾಜ ಸೇವೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಆಗಲಿ’ ಎಂದು ಹಾರೈಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘20 ವರ್ಷಗಳ ಬಳಿಕ ಸಮುದಾಯ ಒಂದರ ರಾಷ್ಟ್ರ ಮಟ್ಟದ ಪದಗ್ರಹಣ ಸಮಾರಂಭ ಕಲಬುರಗಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಸಮಾಜಕ್ಕಾಗಿ ಉತ್ತಮ ಕೆಲಸಗಳು ನಿಮ್ಮಿಂದ ಹೊರಬರಲಿ’ ಎಂದರು.

ಮಹಾಸಭಾದ ಹಿರಿಯ ಸಲಹೆಗಾರ ಕಲ್ಯಾಣದಾಸ ಗದಾಳೆ ಅವರು ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜಿಲ್ಲೆಯ ಭಾವಸಾರ ಕ್ಷತ್ರಿಯ ಸಮಾಜ ಪಾಮಡಿ ಫಂಡ್‌ ಕಾರ್ಯದರ್ಶಿ ಅನಿಲ್‌ ಮಾ.ಜವಳಕರ್, ಉಪಾಧ್ಯಕ್ಷ ಸುರೇಶ ಎಲ್‌ ಮಹೀಂದ್ರಕರ್, ಜಂಟಿ ಕಾರ್ಯದರ್ಶಿ ನಾರಾಯಣರಾವ್ ಟಿ.ಅಮದ್ಕರ್, ಖಜಾಂಚಿ ವೀರಣ್ಣ ಆರ್.ಉತ್ತರಕರ್, ಕಾರ್ಯನಿರತ ಸದಸ್ಯರಾದ ಶ್ರೀನಿವಾರ ಆರ್.ತಂಡ್ಲೆ, ಅರವಿಂದ ಎಂ.ಜವಳಕರ್, ಕಿಷನ್ ಎನ್‌, ಮಿಲಿಂದ್ ತೇಲ್ಕರ್ ಸೇರಿದಂತೆ ಇತರರು ಇದ್ದರು.

‘ವಿದ್ಯಾರ್ಥಿಗಳಿಗೆ ವಸತಿ ನಿಲಯ’

‘ನಮ್ಮಲ್ಲಿ ಸಾಕಷ್ಟು ಪ್ರತಿಭಾನ್ವಿತ ಮಕ್ಳಳಿದ್ದು ಚೆನ್ನಾಗಿ ಓದುತ್ತಿದ್ದಾರೆ. ಅವರಲ್ಲಿ ಕೆಲವು ಪೋಷಕರಿಗೆ ಉನ್ನತ ಶಿಕ್ಷಣ ಕೊಡಿಸಲು ಆಗುತ್ತಿಲ್ಲ’ ಎಂದುರಾಜು ಬಿ.ಜವಳಕರ್ ಹೇಳಿದರು.

‘ನಮ್ಮ ವಿದ್ಯಾವರ್ಧಕ ಟ್ರಸ್ಟ್ ಮೂಲಕ ಸಮಾಜದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ಅರ್ಹರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಎಲ್ಲಾ ಟ್ರಸ್ಟ್‌ಗಳು ಆದಾಯ ಗಳಿಸುವತ್ತ ಗಮನಹರಿಸಿ, ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ತೆರೆಯುವಂತೆ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.