
ಜೇವರ್ಗಿ: ಪಠ್ಯ ಪುಸ್ತಕದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ಇತಿಹಾಸ ಸೇರಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ತಹಶೀಲ್ದಾರ್ ಮಲ್ಲಣ್ಣ ಯಲಗೂರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಪಂ ಮಾಜಿ ಸದಸ್ಯ, ಹಿರಿಯ ದಲಿತ ಮುಖಂಡ ಚಂದ್ರಶೇಖರ ಹರನಾಳ ಮಾತನಾಡಿ, ‘ಜ.1ರಂದು ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ. ಇಂದಿಗೂ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದವರ ಮೇಲೆ ಶೋಷಣೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲಿ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಕುರಿತು ಯುವ ಜನರಿಗೆ ಮಾಹಿತಿ ನೀಡಬೇಕಿದೆ. ಎಸ್‌ಸಿ, ಎಸ್‌ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ. ಭೀಮಾ ನದಿ ದಡದಲ್ಲಿ ಪೇಶ್ವೆ ಸೇನೆ ಹಾಗೂ ಬ್ರಿಟಿಷ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು 500 ಮಹರ್ ಸೈನಿಕರು ಸೋಲಿಸಿ ಶೌರ್ಯ ಮೆರೆದಿದ್ದಾರೆ’ ಎಂದರು.
‘ಕೋರೆಗಾಂವ್ ಯುದ್ಧದ ಇತಿಹಾಸವನ್ನು ಈ ದೇಶದ ಮೇಲ್ವರ್ಗದ ಪರವಾಗಿರುವ ಇತಿಹಾಸಕಾರರು ಮರೆಮಾಚಿದ್ದರು. ಕೇಂಬ್ರಿಡ್ಜ್ ವಿವಿ ಮ್ಯೂಸಿಯಂನಲ್ಲಿ ಬರೆದು ಸಂಗ್ರಹಿಸಿದ್ದನ್ನು ಅಂಬೇಡ್ಕರ್ ಓದಿದರು. ಅವರು ಭಾರತಕ್ಕೆ ಮರಳಿ ಭೀಮಾ ನದಿ ದಡದಲ್ಲಿರುವ ಕೋರೆಗಾಂವ್ ಯುದ್ಧ ನಡೆದ ಸ್ಥಳವನ್ನು ಪರಿಶೀಲಿಸಿ ಉತ್ಖನನ ಮಾಡಿ ಮಹರ್ ಜನಾಂಗದ ಸೈನಿಕರ ಶೌರ್ಯ ಸ್ಥೂಪವನ್ನು ನಿರ್ಮಿಸಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿದರು. ಆದ್ದರಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಕುರಿತು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು’ ಎಂದು ಆಗ್ರಹಿಸಿದರು.
ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ಸಿದ್ರಾಮ ಕಟ್ಟಿ, ರಾಜಶೇಖರ ಶಿಲ್ಪಿ, ಮಾಪಣ್ಣ ಕಟ್ಟಿ, ಶಾಂತಪ್ಪ ಯಲಗೋಡ, ಸಿದ್ದು ಕೆರೂರ, ಶರಣಬಸಪ್ಪ ಲಖಣಾಪೂರ, ಶ್ರೀಮಂತ ಧನ್ನಕರ್, ದೇವಿಂದ್ರ ಮುದಬಾಳ, ಯಶವಂತ ಬಡಿಗೇರ, ಭೀಮರಾಯ ಬಳಬಟ್ಟಿ, ಭಾಗಣ್ಣ ಸಿದ್ನಾಳ, ಸಂಗಣ್ಣ ಕಟ್ಟಿಸಂಗಾವಿ, ಸೂರ್ಯಕಾಂತ ಡೂಗನಕರ್, ಸಂಗಣ್ಣ ಗುಡೂರ, ಸಂಗಣ್ಣ ಗಂವ್ಹಾರ, ಸುಭಾಷ ಕೊಬ್ಬಿನ ಸೇರಿದಂತೆ ಹಲವಾರು ಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.