ಅಫಜಲಪುರ: ಸೊನ್ನ ಭೀಮಾ ಏತ ನೀರಾವರಿ ಯೋಜನೆ ಪೂರ್ಣಗೊಂಡು 20 ವರ್ಷ ಕಳೆದರೂ ಈವರೆಗೂ ಕಾಲುವೆಯ ಕೊನೆಯ ಭಾಗದ ರೈತನಿಗೆ ನೀರು ತಲುಪಿಲ್ಲ.
ತಾಲ್ಲೂಕಿನ ಸೊನ್ನ ಗ್ರಾಮದ ಬಳಿ ಭೀಮ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ, 3.16 ಟಿಎಂಸಿ ನೀರು ಸಂಗ್ರಹಿಸಿ ಎರಡು ಕಾಲುವೆಗಳ ಮೂಲಕ 60 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗೆ ಈವರೆಗೆ ₹1,200 ಕೋಟಿ ಖರ್ಚು ಮಾಡಲಾಗಿದೆ.
ಯೋಜನೆಯ ಯಶಸ್ವಿ ಕೇವಲ ಸರ್ಕಾರ ಮಟ್ಟದಲ್ಲಿ ಮತ್ತು ಕರ್ನಾಟಕ ನೀರಾವರಿ ನಿಗಮದ ದಾಖಲೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಆದರೇ ಈವರೆಗೆ ಹೊಲಗಾಲವೆಯಿಂದ ಒಬ್ಬ ರೈತನು ಜಮೀನಿಗೆ ನೀರು ಉಪಯೋಗಿಸಿಕೊಂಡಿಲ್ಲ.
ಬಳುಂಡಗಿ ಏತ ನೀರಾವರಿ ಯೋಜನೆಯಿಂದ 32 ಗ್ರಾಮಗಳ 41,300 ಎಕರೆ, ಅಳ್ಳಗಿ (ಬಿ) ಏತನೀರಾವರಿಯಿಂದ 11 ಗ್ರಾಮಗಳ 18,700 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಾಲುವೆ ನಿರ್ಮಿಸಲಾಗಿದೆ. ಈ ಯೋಜನೆ ಸಂಪೂರ್ಣ ಯಶಸ್ವಿಯಾದರೆ, ಇಲ್ಲಿನ ತೆರೆದ ಬಾವಿಗಳಿಗೆ, ಕೊಳವೆಬಾವಿಗಳಿಗೆ ಅಂತರ್ಜಲ ಹೆಚ್ಚಳವಾಗುತ್ತದೆ. ಕುಡಿಯುವ ನೀರು ಹಾಗೂ ಕೃಷಿಗೂ ಅನುಕೂಲವಾಗಲಿದೆ.
ತಾಲ್ಲೂಕಿನಲ್ಲಿ ರೈತರು ಮುಂಗಾರು ಬಿತ್ತನೆ ಮಾಡಿದ್ದಾರೆ. ಸಧ್ಯ ಕಾಲುವೆಗೆ ನೀರು ಬಿಟ್ಟಿದ್ದು, ತಾಲ್ಲೂಕಿನ ಮಲ್ಲಾಬಾದ್ ಗ್ರಾಮದ ವರೆಗೆ ಮಾತ್ರ ಕಾಲುವೆಗೆ ನೀರು ಬಂದಿದೆ. ಮುಂದಿನ 20 ಹಳ್ಳಿಗಳಿಗೆ ನೀರು ಬಂದಿಲ್ಲ. ಜಮೀನಿನಲ್ಲಿ ಕಾಲುವೆ ಹಾಯ್ದು ಹೋದರು ನೀರಿಲ್ಲ ಎನ್ನುತ್ತಾರೆ ರೈತ ಮುಖಂಡರಾದ ಲತೀಪ ಪಟೇಲ ಹಾಗೂ ಮಹಿಬೂಬ್ ನದಾಫ್
60 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಭೀಮ ಏತ ನೀರಾವರಿ ಯೋಜನೆಗೆ ಸರ್ಕಾರ ಖರ್ಚು ಮಾಡಿದ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ರೈತರ ಕಷ್ಟಗಳು ತಪ್ಪಲಿಲ್ಲ ಕಾಲುವೆಗೆ ನೀರು ಬರಲಿಲ್ಲಶಿವಕುಮಾರ್ ನಾಟೀಕಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ
ಸೊನ್ನ ಭೀಮ ನದಿ ಏತ ನೀರಾವರಿ ಯೋಜನೆಯಿಂದ 43 ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ಹರಿಸಲು ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕುಶ್ರೀಮಂತ ಬಿರಾದಾರ ತಾಲ್ಲೂಕು ಪ್ರಾಂತ ರೈತ ಸಂಘ ತಾಲ್ಲೂಕು ಅಧ್ಯಕ್ಷ
ಸೊನ್ನ ಭೀಮ ನದಿ ಬ್ಯಾರೇಜ್ ಕಂ ಬ್ರಿಡ್ಜ್‌ನಲ್ಲಿ ನೀರು ಸಂಗ್ರಹವಾಗಿದ್ದರೂ ಅವೈಜ್ಞಾನಿಕ ಕಾಲುವೆ ನಿರ್ಮಾಣ ಮಾಡಿದ್ದರಿಂದ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲ. ಭೀಮ ಏತ ನೀರಾವರಿ ಉಪ ವಿಭಾಗದವರು ಒಂದು ವಾರದಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸಿ ಯೋಜನೆಯ ಕೊನೆಯ ರೈತನಿಗೆ ನೀರು ಹರಿಯುವಂತೆ ವ್ಯವಸ್ಥೆ ಮಾಡಬೇಕು.–ಗುರು ಚಾಂದಕೋಟೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ
ಕಾಲುವೆಯಲ್ಲಿ ಹೂಳು: ಬಾರದ ನೀರು
ಭೀಮ ಬ್ಯಾರೇಜ್‌ನಲ್ಲಿ ನೀರಿದ್ದರೂ ರೈತರಿಗೆ ದೊರೆಯುತ್ತಿಲ್ಲ. ಈ ಹಿಂದೆ ಕಾಲುವೆ ಹೂಳು ತೆಗೆಯುವಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಕಾಲುವೆಯಲ್ಲಿ ಹೂಳು ತುಂಬಿದ್ದರಿಂದ ನೀರು ಮುಂದೆ ಹೋಗುತ್ತಿಲ್ಲ. ಭೀಮ ಏತ ನೀರಾವರಿ ಉಪ ವಿಭಾಗದಲ್ಲಿ ಒಬ್ಬರು ಕಾರ್ಯಪಾಲಕ ಎಂಜನೀಯರ್ ಮೂವರು ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಹಾಗೂ 80ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ಅವರಿಗಾಗಿ ಹಣ ಖರ್ಚು ಮಾಡಿ ಕಚೇರಿ ನಿವಾಸ ನಿರ್ಮಿಸಲಾಗಿದೆ. ಆದರೆ ಇಲ್ಲಿ ಯಾರು ಇರುವುದಿಲ್ಲ. ಈ ಕುರಿತು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಒತ್ತಾಯಿಸಿದ್ದಾರೆ.
‘ಗುತ್ತಿಗೆದಾರರ ಪರವಾನಗಿ ರದ್ದು ಪಡಿಸಿ’
‘ಭೀಮ ಕಾಲುವೆಗೆ 2026 ಏಪ್ರಿಲ್ ವರೆಗೆ ನೀರು ಹರಿಸಬೇಕು. ಭೀಮಾ ಏತ ನೀರಾವರಿ ಕಾಲುವೆಗಳು ಕಳಪೆ ಮಾಡಿದ ಗುತ್ತಿಗೆದಾರರ ಪರವಾನಗಿ ರದ್ದು ಪಡಿಸಬೇಕು ಹಾಗೂ ಅವರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಗುರು ಚಾಂದಕೋಟೆ ಆಗ್ರಹಿಸಿದ್ದಾರೆ ‘ಯೋಜನೆಯಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆಲಮಟ್ಟಿ ಯೋಜನೆ ಮಾದರಿಯಲ್ಲಿ ಪರಿಹಾರ ನೀಡಬೇಕು ಮತ್ತು ಮುಳುಗಡೆಯಾದ ಗ್ರಾಮದ ಜನರಿಗೆ ಸಮರ್ಪಕವಾದ ಪುನರ್ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.