ADVERTISEMENT

ಚಿತ್ತಾಪುರ | ‘ಭೀಮನಡೆ’ ಪಥ ಸಂಚಲನ: ‘ನೀಲಿ ಶಕ್ತಿ, ಭಾವೈಕ್ಯ’ ಪ್ರದರ್ಶನ

ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 10:01 IST
Last Updated 1 ಡಿಸೆಂಬರ್ 2025, 10:01 IST
   

ಚಿತ್ತಾಪುರ (ಕಲಬುರಗಿ ಜಿಲ್ಲೆ): ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 2.40ಕ್ಕೆ ‘ಭೀಮನಡೆ’ ಪಥ ಸಂಚಲನ ಆರಂಭವಾಯಿತು.

ನ.16ರಂದು ಆರ್‌ಎಸ್‌ಎಸ್‌ ನಡೆಸಿದ ಗಣವೇಷಧಾರಿಗಳ ಪಥಸಂಚಲನಕ್ಕೆ ಪರ್ಯಾಯ ಎಂಬಂತೆ ನಡೆದ ಈ ‘ಭೀಮ ನಡೆ’ ಪಥಸಂಚಲನವು ‘ನೀಲಿ ಶಕ್ತಿ’, ಸರ್ವಧರ್ಮ ಭಾವೈಕ್ಯ ಸಂದೇಶ ಸಾರಿತು.

ಬೆಳಿಗ್ಗೆ 11.30 ಗಂಟೆಗೆ ಶುರುವಾಗಬೇಕಿದ್ದ ಪಥಸಂಚಲನವು ಇಲ್ಲಿನ ಚಿತ್ತಾವಲಿ ಚೌಕ್‌ನಲ್ಲಿ ಮಧ್ಯಾಹ್ನ 2.40ಕ್ಕೆ ಆರಂಭವಾಯಿತು. ಸಂವಿಧಾನ, ಅಂಬೇಡ್ಕರ್‌ ಪರ ಘೋಷಣೆಗಳು ಮೊಳಗಿದವು.

ADVERTISEMENT

ಬಿಳಿ ಅಂಗಿ, ಖಾಕಿ ಪ್ಯಾಂಟು, ನೀಲಿ ಟೊಪ್ಪಿಗೆ ಧರಿಸಿದ್ದ ನೂರಾರು ಮಂದಿ ಪಥಸಂಚಲನದಲ್ಲಿ ಶಿಸ್ತಿನಿಂದ ಹೆಜ್ಜೆಹಾಕಿದರು. ಅವರ ಮೇಲೆ ಮಹಿಳೆಯರು ಏರಿದಂತೆ ಸಾರ್ವಜನಿಕರು ಪುಷ್ಪವೃಷ್ಟಿಗೈದು ಗೌರವಿಸಿದರು.

ಸಾರ್ವಜನಿಕರು ಪಥ ಸಂಚಲನ ಸಾಗುವ ರಸ್ತೆಯ ಮಾರ್ಗದ ಇಕ್ಕೇಲಗಳಲ್ಲಿ ನಿಂತು ಸಡಗರವನ್ನು ಕಣ್ತುಂಬಿಕೊಂಡರು.

ವೇದಿಕೆ ಸಿದ್ಧ: ಪಥಸಂಚಲನದ ಬಳಿಕ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಚಿತ್ತಾಪುರ ಪಟ್ಟಣದಲ್ಲಿ ಭೀಮನಡೆ ಕಾರ್ಯಕ್ರಮವು ಐತಿಹಾಸಿಕವಾಗಿ ದಾಖಲಾಗಲಿದೆ ಎಂದು ದಲಿತ ಮುಖಂಡ ಶಿವರುದ್ರ ಭೀಣಿ ಪ್ರತಿಕ್ರಿಯಿಸಿದ್ದಾರೆ.

ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.