ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯ ಸೇರಿದಂತೆ ಜಲಾಶಯಗಳಿಂದ ಸೋಮವಾರ ಬೆಳಗ್ಗೆ 2.30 ಲಕ್ಷ ಕೂಸೆಕ್ ನೀರು ಸೊನ್ನ ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಭೀಮ ನದಿಗೆ ಬಿಟ್ಟಿರುವುದರಿಂದ ಘತ್ತರಗಾ ಮತ್ತು ದೇವಲ ಗಾಣಗಾಪುರದ ಸೇತುವೆಗಳು ಮುಳುಗಡೆಯಾಗಿವೆ.
ಇದರಿಂದ ವಿಜಯಪುರದ ಸಿಂದಗಿ ಮತ್ತು ಕಲಬುರಿಯ ಜೇವರ್ಗಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಳೆದೆರಡು ದಿನಗಳಿಂದ ಕಡಿತವಾಗಿದೆ. ಅಲ್ಲದೆ ತಾಲ್ಲೂಕಿನ ಮಲ್ಲಾಬಾದ, ಬಾದನಹಳ್ಳಿ, ಬಂಕಲದ, ಜೇವರ್ಗಿ ಬಿ ಗ್ರಾಮದ ಬೋರಿಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ನದಿಗೆ ಹೆಚ್ಚು ನೀರು ಬರುತ್ತಿರುವುದರಿಂದ ನದಿಯ ದಡದ ಎರಡು ಭಾಗದ ಬೆಳೆಗಳು ಹಾಳಾಗುತ್ತಿವೆ. ಅಲ್ಲದೆ ಮಧ್ಯಾಹ್ನದ ನಂತರ ಕೆಲವು ಗ್ರಾಮಗಳ ಸಂಪರ್ಕ ಕಡಿತವಾಗುವ ಸಂಭವಿದೆ ಈಗಾಗಲೇ ತಾಲ್ಲೂಕು ಆಡಳಿತ ಅಪಾಯ ಕಂಡುಬರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಘತ್ತರಗಾ ಹಾಗೂ ದೇವಲ ಗಾಣಗಾಪುರ ಸೇತುವೆಗಳಿಗೆ ಪೊಲೀಸರನ್ನು ಕಾವಲಿಡಲಾಗಿದೆ ಯಾರು ಸೇತುವೆಯನ್ನು ದಾಟುಸಾಹಸಕ್ಕೆ ಕೈ ಹಾಕಬಾರದು ಎಂದು ತಿಳಿಸಿದರು.
ತಾಲ್ಲೂಕಿನ ಮಣ್ಣೂರು ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದ್ದು ದರ್ಶನ ಹಾಗೂ ಪೂಜೆಯನ್ನು ಬಂದ್ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಮಣ್ಣೂರದಿಂದ ಇಂಡಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಮುಳುಗಡೆಯಾಗಿದ್ದರಿಂದ ಸಂಪರ್ಕ ಕಡಿತವಾಗಿದೆ.
2.30 ಲಕ್ಷ ಕ್ಯೂಸೆಕ್ ನೀರು:
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಇಂದು 70 ಸಾವಿರ ಕ್ಯೂಸೆಕ್ ನೀರು ಹಾಗೂ ಶೀನಾ ನದಿಯಿಂದ 1.60 ಲಕ್ಷ ಕ್ಯೂಸೆಕ್ ನೀರು ಸೇರಿದಂತೆ ಭೀಮಾ ನದಿಗೆ ಒಟ್ಟು 2.30 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಉಜನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ನೀರು ಅಫಜಲಪುರ ತಾಲ್ಲೂಕಿನ ಭೀಮಾ ನದಿಗೆ ಮಂಗಳವಾರ ರಾತ್ರಿ ಅಥವಾ ನಾಡಿದ್ದು ಬುಧವಾರ ಬೆಳಿಗ್ಗೆ ಬಂದು ತಲುಪಲಿದೆ.ಆದ್ದರಿಂದ ಭೀಮಾ ನದಿ ದಂಡೆಯಲ್ಲಿರುವ ರೈತರು ತಮ್ಮ ಜಮೀನುಗಳಲ್ಲಿರುವ ಪಂಪ್ ಸೆಟ್ ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಭೀಮಾ ನೀರಾವರಿ ಯೋಜನೆಯ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ್ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.