ADVERTISEMENT

ವಾಡಿ | ಕಡಬೂರ ಮುಳುಗಡೆ; ತೆಪ್ಪದಲ್ಲೇ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 7:03 IST
Last Updated 28 ಸೆಪ್ಟೆಂಬರ್ 2025, 7:03 IST
ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮ ಭೀಮಾ ನದಿ ಹರಿವಿನಿಂದ ಮುಳುಗಡೆಯಾಗಿದ್ದು ತೆಪ್ಪದಲ್ಲೇ ಗ್ರಾಮಸ್ಥರು ಸಾಮಾನು ಸಾಗಿಸಿದರು
ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮ ಭೀಮಾ ನದಿ ಹರಿವಿನಿಂದ ಮುಳುಗಡೆಯಾಗಿದ್ದು ತೆಪ್ಪದಲ್ಲೇ ಗ್ರಾಮಸ್ಥರು ಸಾಮಾನು ಸಾಗಿಸಿದರು   

ವಾಡಿ: ಉಕ್ಕಿ ಹರಿಯುತ್ತಿರುವ ಭೀಮಾನದಿಯ ಪ್ರವಾಹಕ್ಕೆ ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮ ಅಕ್ಷರಶ ನಲುಗಿದೆ. ಗ್ರಾಮದ ಬಹುತೇಕ ಮನೆಗಳಿಗೆ ನೀರು ಹೊಕ್ಕು ಅವಾಂತರ ಸೃಷ್ಟಿಸಿದೆ.

ನದಿಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ನೀರು ಗ್ರಾಮಸ್ಥರನ್ನು ಗಾಬರಿ ಮಾಡಿದೆ. ನೀರಿನ ಪ್ರವಾಹ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ. ಹೀಗಾಗಿ ಇಡೀ ಗ್ರಾಮಸ್ಥರು ನಿದ್ದೆ ಮರೆತು ಜಾಗರಣೆ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು ಜನರು ಆಶ್ರಯಕ್ಕಾಗಿ ಅಂಗಲಾಚುವಂತೆ ಮಾಡಿದೆ. ಮೊಳಕಾಲುದ್ದ, ಕೆಲವೆಡೆ ಎದೆಮಟ್ಟ ನೀರು ಬಂದಿದ್ದು ಜನರು ಗ್ರಾಮದಲ್ಲಿ ಸಂಚರಿಸಲು ಸ್ಥಳೀಯ ಮೀನುಗಾರರ ತೆಪ್ಪಗಳ ಮೊರೆ ಹೋಗುವಂತಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ನೀರು ಗ್ರಾಮಕ್ಕೆ ಹೊಕ್ಕಿದೆ ಎನ್ನುತ್ತಾರೆ ಸ್ಥಳೀಯರು.

ಹೊಸ ಬಡಾವಣೆಯ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಜನರನ್ನು ತಮ್ಮ ಸಾಮಾನುಗಳ ಸಮೇತ ಸ್ಥಳಾಂತರಿಸಲಾಗಿದೆ. ನಿರಂತರವಾಗಿ ಪ್ರವಾಹ ಹೆಚ್ಚುತ್ತಿದ್ದು ಮುಂದೇನು ಎನ್ನುವ ಚಿಂತೆಯಲ್ಲಿ ಸ್ಥಳೀಯರು ಮುಳುಗಿದ್ದಾರೆ. ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಕಾಳಜಿ ಕೇಂದ್ರದಲ್ಲಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ನಾಲವಾರ ಸ್ಟೇಷನ್ ತರಕಸಪೇಟ್ ಸಂಪರ್ಕಿಸುವ ರಸ್ತೆ ಕೆರೆಯ ನೀರು ಹರಿದು ಕೊಚ್ಚಿಹೋಗಿದ್ದು ಸಂಪರ್ಕ ಕಡಿತಗೊಂಡಿದೆ. ಕೊಲ್ಲೂರು ಸರ್ಕಾರಿ ಪ್ರೌಢಶಾಲೆ ಮೈದಾನ ಸಂಪೂರ್ಣ ನೀರಿನಿಂದ ಭರ್ತಿಯಾಗಿದೆ.

ಕಡಬೂರ ಗ್ರಾಮಕ್ಕೆ ನೀರು ಹೊಕ್ಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.