ಕಲಬುರಗಿ: ಬಹಳ ಇಷ್ಟಪಟ್ಟು ಕಟ್ಟಿಸಿದ್ದ ಮನೆಯಲ್ಲಿ ಐದು ದಿನಗಳ ಹಿಂದಿನ ತಡರಾತ್ರಿಯಲ್ಲಿ ನುಗ್ಗಿದ ಭೀಮಾ ಪ್ರವಾಹದ ನೀರು ಮನೆಯ ಒಡತಿ ಅಂಜನಾದೇವಿ ಅವರ ಕನಸುಗಳನ್ನೇ ನುಚ್ಚು ನೂರು ಮಾಡಿತು.
ಚಿತ್ತಾಪುರ ತಾಲ್ಲೂಕಿನ ಕಡಬೂರಿನ ಕುರುಬರ ಓಣಿ, ಅಂಬೇಡ್ಕರ್ ಕಾಲೊನಿಯಲ್ಲಿನ 65ಕ್ಕೂ ಅಧಿಕ ಮನೆಗಳಿಗೆ ನೀರು ಹೊಕ್ಕು ನಿಂತಿದೆ. ಒಂದಷ್ಟು ನೀರು ಇಳಿದಂತೆ ಮಾಡಿ ಮತ್ತೆ ಏರುವ ಪ್ರವಾಹದ ಆಟದಲ್ಲಿ ಸಿಕ್ಕು ಇಲ್ಲಿನ ನೂರಾರು ನಿವಾಸಿಗಳು ಪರದಾಡುತ್ತಿದ್ದಾರೆ.
‘ಪ್ರಜಾವಾಣಿ’ ತಂಡವು ಸೋಮವಾರ ಮಧ್ಯಾಹ್ನ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಲಾವೃತವಾದ ಮನೆಗಳಲ್ಲಿನ ತೊಯ್ದು ಹೋದ ಜೋಳ, ಅಕ್ಕಿ, ಮೊಬೈಲ್, ಆಧಾರ್, ಕಾರ್ಡ್, ಮಕ್ಕಳ ಟಿಸಿ, ಎಲ್‌ಐಸಿ ಪಾಲಿಸಿ, ಫ್ರಿಡ್ಜ್, ಹೊಸದಾಗಿ ಖರೀದಿಸಿ ತಂದಿದ್ದ ಸೋಫಾ ಸೆಟ್, ಗಾದಿ ಎಲ್ಲವೂ ಭೀಮಾರ್ಪಣವಾಗಿತ್ತು.
ಮಹಾ ಸ್ವಾಭಿಮಾನಿಯಾಗಿರುವ ಅಂಜನಾದೇವಿ ಅವರು ಕಾಳಜಿ ಕೇಂದ್ರಕ್ಕೂ ಸ್ಥಳಾಂತರಗೊಂಡಿಲ್ಲ. ಅಡುಗೆ ಮಾಡಿಕೊಳ್ಳೋಣವೆಂದರೆ ಸಾಮಾನು ಸರಂಜಾಮುಗಳೂ ಕಾಣಲಿಲ್ಲ. ರೈತ ಸಂಘದಲ್ಲಿ ಗುರುತಿಸಿಕೊಂಡಿರುವ ವೀರೇಶ ಅವರೊಂದಿಗೆ ಮನೆಯಲ್ಲಿನ ಸಾಮಾನುಗಳನ್ನು ಪಕ್ಕಕ್ಕೆ ಎತ್ತಿ ಇಟ್ಟು ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮನೆಯೊಳಗೆ ಪ್ರವೇಶಿಸಿದಾಗ ಯಾವಾಗ ಕಾಲು ಜಾರುವುದೋ ಎಂಬ ಆತಂಕ. ಐದು ದಿನಗಳಿಂದ ಸತತವಾಗಿ ನೀರು ನಿಂತುಕೊಂಡಿದ್ದರಿಂದ ಇಡೀ ನೆಲ ಪಾಚಿಕಟ್ಟಿದಂತಾಗಿದೆ.
ಅಂಜನಾದೇವಿ ಅವರ ಮನೆ ಎದುರಿನವರಾದ ಈಶ್ವರಿ ಅವರು ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಸಂಪರ್ಕಕ್ಕೆ ಏಕೈಕ ಆಸರೆಯಾಗಿದ್ದ ಮೊಬೈಲ್ ಫೋನ್‌ಗಳನ್ನು ಕಟ್ಟೆಯ ಮೇಲೆ ಬಿಸಿಲಿಗೆ ಇರಿಸಿದ್ದರು.
‘ಪ್ರತಿ ಬಾರಿ ಪ್ರವಾಹ ಬಂದಾಗಲೂ ನಮ್ಮ ಮನೆಯೊಳಗೆ ನೀರು ಹೋಗುತ್ತದೆ. ಬೆಳಿಗ್ಗೆ ನೀರು ಬಂದಿದ್ದರೆ ಹೇಗೋ ಸಾಮಾನುಗಳನ್ನು ಬೇರೆ ಕಡೆ ಸಾಗಿಸಬಹುದಿತ್ತು. ಆದರೆ, ರಾತ್ರಿ ಇಲ್ಲಿಂದ ಜೀವ ಉಳಿಸಿಕೊಂಡರೆ ಸಾಕು ಎಂದು ಬೇರೆ ಕಡೆ ಹೋದೆವು. ಈಗಲೂ ನೋಡ್ರಿ ನಮ್ಮ ಮನೆ ನೀರಲ್ಲೇ ನಿಂತಿದೆ’ ಎಂದು ಜಲಾವೃತವಾದ ಮನೆಯನ್ನು ತೋರಿಸಿದರು.
ಕುರುಬರ ಓಣಿಯ ಕನಕದಾಸರ ಕಟ್ಟೆ ಜಲಾವೃತವಾಗಿತ್ತು. ಆನತಿ ದೂರದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವು ತನ್ನ ಜನಗಳ ಅಸಹಾಯಕ ಸ್ಥಿತಿಯನ್ನು ಕಂಡು ಮಮ್ಮಲ ಮರಗುತ್ತಾ ನಿಂತಂತೆ ಭಾಸವಾಯಿತು. ಅದರ ಪಕ್ಕದಲ್ಲಿಂದಲೇ ಎಸ್‌ಡಿಆರ್‌ಎಫ್‌ನ ದೋಣಿ ಮನೆಯಿಂದ ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಲು ಬಂದ ಸಂತ್ರಸ್ತರನ್ನು ವಾಪಸ್ ಕರೆದುಕೊಂಡು ಹೋಗುತ್ತಿತ್ತು.
ಮನೆಯ ಮೇಲೆ ಕುಳಿತು ದಿನ ಕಳೆದರು
ಕಡಬೂರು ಗ್ರಾಮದ ಜಲಾವೃತವಾದ ಪ್ರದೇಶದಲ್ಲಿ ಮನೆ ಹೊಂದಿರುವ ಬಹುತೇಕ ಜನರು ಸ್ಥಳಾಂತರಗೊಂಡಿದ್ದರೂ 15ಕ್ಕೂ ಅಧಿಕ ಗ್ರಾಮಸ್ಥರು ತಮ್ಮ ಮನೆಯ ಚಾವಣಿಯ ಮೇಲೆ ಕುಳಿತು ಪ್ರವಾಹ ಇಳಿಮುಖವಾಗುವುದನ್ನೇ ಕಾಯುತ್ತಿದ್ದರು. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಪ್ರವಾಹ ಇಳಿದಿತ್ತಾದರೂ ಮನೆಯ ಹತ್ತಿರ ಹೋಗುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಕಷ್ಟಪಟ್ಟು ನೀರಲ್ಲಿ ನಡೆಯುತ್ತಾ ಮನೆಯ ಬಳಿ ಹೋಗಿ ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.