ADVERTISEMENT

ಕಲಬುರಗಿ: ಭೀಮಾ ನದಿಗೆ 42,000 ಕ್ಯೂಸೆಕ್ ನೀರು

ಸೊನ್ನ, ಬೆಣ್ಣೆತೋರಾ ಬ್ಯಾರೇಜ್ ಪಾತ್ರದಲ್ಲಿ ನದಿ ದಂಡೆಗೆ ಹೋಗದಂತೆ ಸಾರ್ವಜನಿಕರಲ್ಲಿ ಡಿ.ಸಿ. ಮನವಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:30 IST
Last Updated 28 ಜುಲೈ 2025, 5:30 IST
<div class="paragraphs"><p>ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ನೀರು ಗೇಟು ತಲುಪಿರುವುದು</p></div>

ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ನೀರು ಗೇಟು ತಲುಪಿರುವುದು

   

ಕಲಬುರಗಿ: ಮಹಾರಾಷ್ಟ್ರ ರಾಜ್ಯದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 42 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜಿಗೆ ಭಾನುವಾರ ಸಂಜೆ ಹೊತ್ತಿಗೆ ತಲುಪಿದೆ. ಇನ್ನು ಉಜ್ಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ನೀರು ಬಂದಲ್ಲಿ ಸೊನ್ನ ಬ್ಯಾರೇಜ್ ಮೂಲಕ ಭೀಮಾ ನದಿಗೆ ಹಾಗೂ ಬೆಣ್ಣೆತೋರಾ ಜಲಾಶಯದ ಮೂಲಕ ಕೆಳ ಪಾತ್ರದ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ನದಿ ದಂಡೆ ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

ಸೊನ್ನ ಬ್ಯಾರೇಜ್‌ನಿಂದ ಈಗಾಗಲೆ 4,000 ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಮಳೆಯ ಮುನ್ಸೂಚನೆ ಇರುವ ಕಾರಣ ಜಲಾಶಯದ ಒಳಹರಿವು ಹೆಚ್ಚಾದಂತೆ ಹೊರ ಹರಿವು ಹೆಚ್ಚಲಿದೆ. ಸೊನ್ನ ಮತ್ತು ಬೆಣ್ಣೆತೋರಾ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ಕೋರಿದ್ದಾರೆ.

ADVERTISEMENT

ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ, ಶಾಲೆ, ಅಂಗನವಾಡಿ ಹಾಗೂ ಇತರೆ ಕಟ್ಟಡಗಳ ಕುಸಿಯುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಸಾರ್ವಜನಿಕರ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳನು ತೆಗದುಕೊಳ್ಳಬೇಕು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಮೈಕ್ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ತರನ್ನುಮ್ ನಿರ್ದೇಶನ ನೀಡಿದ್ದಾರೆ.

ಕೇಂದ್ರಸ್ಥಾನ ಬಿಡದಂತೆ ಸೂಚನೆ

ಜಿಲ್ಲಾ ತಾಲ್ಲೂಕು ಹೋಬಳಿ ಹಾಗೂ ಗ್ರಾಮ ಪಂಚಾಯಿತಿಮಟ್ಟದ ಅಧಿಕಾರಿಗಳು-ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಪ್ರವಾಹ ಮತ್ತು ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಸಂಭವನೀಯ ಪ್ರವಾಹ ಎದುರಾದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಸೂಚಿಸಿದ್ದಾರೆ.

ಚಂದ್ರಂಪಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು ಜಲಾಶಯ ಶೇ 54ರಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ ಕಳೆದ 2 ತಿಂಗಳಲ್ಲಿ 7 ಅಡಿ ನೀರು ಹರಿದು ಬಂದರೆ ಒಂದೇ ದಿನ 5 ಅಡಿ ನೀರು ಹರಿದು ಬಂದಿದೆ. ಸದ್ಯ ಜಲಾಶಯದ ನೀರಿನ ಮಟ್ಟ 1601 ಅಡಿ ತಲುಪಿದೆ ಎಂದು ಯೋಜನಾಧಿಕಾರಿ ಚೇತನ ಕಳಸ್ಕರ್ ತಿಳಿಸಿದ್ದಾರೆ. ಮಳೆಯಿಂದ ತಾಲ್ಲೂಕಿನ ಹೂಡದಳ್ಳಿ ಐನಾಪುರ (ಹಳೆ) ಹಾಗೂ ದೋಟಿಕೊಳ ಕೆರೆಗಳು ಭರ್ತಿಯಾಗಿವೆ.

ನಾಗರಾಳ ಜಲಾಶಯದಿಂದ ಮತ್ತೆ ನೀರು ಬಿಡುಗಡೆ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಭಾನುವಾರ ರಾತ್ರಿ 900 ಕ್ಯುಸೆಕ್ ನೀರು ಹೊರಬಿಡಲಾಗಿದೆ. ಜಲಾಶಯಕ್ಕೆ 489 ಕ್ಯುಸೆಕ್ ಒಳಹರಿವು ಇದ್ದು ಜಲಾಶಯದ ನೀರಿನ ಮಟ್ಟ 489.65 ಮೀಟರ್ ಇದೆ ಎಂದು ಯೋಜನೆಯ ಎಇಇ ಅಮೃತ ಪವಾರ ಹಾಗೂ ಎಇ ವಿನಾಯಕ ಚವ್ಹಾಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.