
ಕಲಬುರಗಿ: ‘ಭಾರತ ಬಹುತೇಕ ಹಳ್ಳಿಗಳಿಂದ ಕೂಡಿದ ದೇಶ. ಬಡವರು, ಹಿಂದುಳಿದ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಿದ್ದ ಕಾಲಘಟ್ಟದಲ್ಲಿ ಬಹುತೇಕ ಮಠಗಳು ನಿಸ್ವಾರ್ಥದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರದೊಂದಿಗೆ ಅನ್ನದಾಸೋಹ ನೀಡಿ ಸಾಮಾಜಿಕ ಜಾಗೃತಿ ಮಾಡಿದ ಶ್ರೇಯ ಮಠಗಳಿಗೆ ಸಲ್ಲುತ್ತದೆ’ ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಹೇಳಿದರು.
ಚಿತ್ತಾಪುರ ತಾಲ್ಲೂಕಿನ ಸುಕ್ಷೇತ್ರ ಸೂಗೂರು ಎನ್. ಗ್ರಾಮದ ಭೋಜಲಿಂಗೇಶ್ವರ ರಥೋತ್ಸವದ ನಂತರ ನಡೆದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾನ್ನಿಧ್ಯವಹಿಸಿದ್ದ ಪೀಠಾಧಿಪತಿ ಹಿರಗಪ್ಪ ತಾತ ಮಾತನಾಡಿ, ‘ಧರ್ಮವನ್ನು ರಕ್ಷಿಸಿದರೆ ಧರ್ಮವೂ ನಮ್ಮನ್ನು ರಕ್ಷಿಸುತ್ತದೆ. ಜಾತ್ರೆ, ರಥೋತ್ಸವಗಳಿಂದ ಎಲ್ಲ ಜಾತಿ, ಧರ್ಮದವರು ಒಂದೇ ಎನ್ನುವ ಸೌಹಾರ್ದದ ಬೆಸುಗೆ ಬೆಳೆಯಲು ಸಾಧ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ‘ಬುದ್ದ, ಯೇಸುಕ್ರಿಸ್ತರ ಹಿತೋಪದೇಶಗಳು ಅರ್ಧ ಜಗತ್ತು ಕೇಳಿತು. ಜನರ ದುಃಖ ಕಳೆಯಲು ಮಹಾತ್ಮರ ಉಗಮವಾಗುತ್ತದೆ. ಎಷ್ಟೇ ಬೆಲೆ ಬಾಳುವ ಸಾಬೂನಿದ್ದರೂ ಅದು ಮನಸ್ಸಿನ ಕೊಳೆ ತೊಳೆಯಲ್ಲ. ಜಗತ್ತಿನ ದುಃಖ ಕಳೆಯಲು ಯಾವ ಯೂನಿವರ್ಸಿಟಿಯಿಂದಲೂ ಸಾಧ್ಯವಿಲ್ಲ. ಮನದ ಕೊಳೆ ತೊಲಗಿಸುವ ಮಹಾಶರಣ ಭೋಜಲಿಂಗೇಶ್ವರ’ ಎಂದರು.
ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಅನಪುರ, ಯಾದಗಿರಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕ್‌ಕುಮಾರ ದೋಖಾ, ಬಿಜೆಪಿ ಮುಖಂಡ ಸಿದ್ದಣಗೌಡ ಕಾಡಂನೂರ ಮಾತನಾಡಿದರು.
ಸಿಡಿಮದ್ದು ಪ್ರದರ್ಶನ: ಭೋಜಲಿಂಗೇಶ್ವರ ರಥೋತ್ಸವದಲ್ಲಿ ಸುಡುಮದ್ದು ಪ್ರದರ್ಶನ ಅತ್ಯಂತ ಸಡಗರದಿಂದ ನಡೆಯಿತು. ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಜೆಟ್ಟೆಪ್ಪ ಪೂಜಾರಿ ರಾಜೋಳ ಬಾಂಬೆರವರು ಶ್ರೀಮಠಕ್ಕೆ ವಾಹನ ವ್ಯವಸ್ಥೆ ಕಲ್ಪಿಸಿ ಭಕ್ತಿ ಮೆರೆದರು. ನಿರುಪಾದಿ ದೇವರು ಗುಳೇದಗುಡ್ಡ, ನಿಂಗಯ್ಯ ತಾತಾ ಗೊಂದೆನೂರು, ಹಿರಿಯ ಮುಖಂಡ ಭೀಮಣ್ಣ ಸಾಲಿ, ಶ್ರೀಮಠದ ವಕ್ತಾರ ಈರಣ್ಣ ಬಲ್ಕಲ್, ಎಸ್.ಎಸ್.ಜುಗೇರಿ, ಕುರುಬ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಮಲ್ಲಯ್ಯ ಕಸಬಿ, ಬಸವರಾಜ ಹವಾಲ್ದಾರ, ನರಸಿಂಗ್‌ರಾವ್, ದೇವಪ್ಪಗೌಡ ರಾಚನಹಳ್ಳಿ, ಪ್ರಭು ಹೂಗಾರ, ಶರಣು ಬೋಳಾರಿ, ಸಾಬು ಚಂಡ್ರಿಕಿ, ದೇವು ಇದ್ದರು.
ಸುಕ್ಷೇತ್ರ ಸೂಗೂರಿನಲ್ಲಿ ಭೋಜಲಿಂಗೇಶ್ವರ ಶರಣರ ದೇವಸ್ಥಾನವು ಕರ್ನಾಟಕದ ರಾಮಮಂದಿರವಾಗಿ ಕಂಗೊಳಿಸುತ್ತಿದೆ.–ಚನ್ನಾರಡ್ಡಿ ಪಾಟೀಲ ತುನ್ನೂರ, ಯಾದಗಿರಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.