ADVERTISEMENT

ಭೂದಾಖಲೆಗಳ ಗಣಕೀಕರಣಕ್ಕೆ ‘ಭೂಸುರಕ್ಷಾ’; 7 ತಿಂಗಳಿನಿಂದ ಹಗಲಿರುಳು ಕೆಲಸ

ಮುಕ್ತಾಯ ಹಂತಕ್ಕೆ

ಜಗನ್ನಾಥ ಡಿ.ಶೇರಿಕಾರ
Published 25 ಸೆಪ್ಟೆಂಬರ್ 2024, 6:50 IST
Last Updated 25 ಸೆಪ್ಟೆಂಬರ್ 2024, 6:50 IST
ಚಿಂಚೋಳಿಯ ತಾಲ್ಲೂಕು ಆಡಳಿತ ಸೌಧದಲ್ಲಿ ಭೂ ದಾಖಲೆಗಳನ್ನು ಗಣಕೀಕರಣ ಮಾಡಲು 10ಕ್ಕೂ ಹೆಚ್ಚು ಮಂದಿ ಸ್ಕ್ಯಾನಿಂಗ್‌ ಮಾಡುತ್ತಿರುವುದನ್ನು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ವೆಂಕಟೇಶ ದುಗ್ಗನ್ ಮತ್ತು ಭೀಮರಡ್ಡಿ ಹುಡೇದ ಪರಿಶೀಲಿಸಿದರು
ಚಿಂಚೋಳಿಯ ತಾಲ್ಲೂಕು ಆಡಳಿತ ಸೌಧದಲ್ಲಿ ಭೂ ದಾಖಲೆಗಳನ್ನು ಗಣಕೀಕರಣ ಮಾಡಲು 10ಕ್ಕೂ ಹೆಚ್ಚು ಮಂದಿ ಸ್ಕ್ಯಾನಿಂಗ್‌ ಮಾಡುತ್ತಿರುವುದನ್ನು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ವೆಂಕಟೇಶ ದುಗ್ಗನ್ ಮತ್ತು ಭೀಮರಡ್ಡಿ ಹುಡೇದ ಪರಿಶೀಲಿಸಿದರು   

ಚಿಂಚೋಳಿ: ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ದೂರದೃಷ್ಟಿಯ ಭೂಸುರಕ್ಷಾ ಯೋಜನೆ ಜಾರಿಗೆ ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿ ತಾಲ್ಲೂಕು ಆಯ್ಕೆಯಾಗಿದೆ.

‘ಹಿಂದುಳಿದ ಮತ್ತು ಅತಿ ಹೆಚ್ಚು ಕಡತಗಳನ್ನು ಹೊಂದಿರುವ ತಾಲ್ಲೂಕುಗಳನ್ನು ಭೂಸುರಕ್ಷಾ ಯೋಜನೆ ಪ್ರಾಯೋಗಿಕ ಜಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಕಳೆದ ಮಾರ್ಚ್‌ ತಿಂಗಳಿನಿಂದ ಹಗಲಿರುಳು ಭೂದಾಖಲೆಗಳು ಮತ್ತು ವಿವಿಧ ಆದೇಶ ಪತ್ರಗಳ ಸ್ಕ್ಯಾನಿಂಗ್‌ ಮೂಲಕ ಗಣಕಯಂತ್ರದಲ್ಲಿ ಉಳಿಸಿಕೊಂಡು ಅದನ್ನು ಭೂಮಿ ಮಾನಿಟರಿಂಗ್ ಸೆಲ್‌ನ ವೆಬ್‌ಸೈಟ್‌ಗೆ ಅಪಲೋಡ್‌ ಮಾಡುವ ಕಾರ್ಯ ಭರದಿಂದ ಸಾಗಿದ್ದು ಬಹುತೇಕ ಮುಕ್ತಾಯದ ಹಂತದಲ್ಲಿದೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ಇಲ್ಲಿವರೆಗೆ 15 ಲಕ್ಷ ಪುಟಗಳ ದಾಖಲೆಗಳನ್ನು ಸ್ಕ್ಯಾನಿಂಗ್ ನಡೆಸಿದ ಸಿಬ್ಬಂದಿ ನಿತ್ಯವೂ ತಮ್ಮ ಪ್ರಗತಿಯನ್ನು ದಾಖಲಿಸಲೇಬೇಕು. ಇವುಗಳ ಮೇಲ್ವಿಚಾರಣೆಯನ್ನು ಭೂದಾಖಲೆಗಳ ಶಾಖೆಯ ವಿಷಯ ನಿರ್ವಾಹಕ ಭೀಮರಡ್ಡಿ ಹುಡೇದ ನಡೆಸುತ್ತಿದ್ದಾರೆ.

ADVERTISEMENT

ಕೇವಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಇಡುವುದಷ್ಟೇ ಅಲ್ಲದೇ ಹಳೆಯ ದಾಖಲೆಗಳ ಕಡತಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ಯಾವ ಕಡತ ಎಲ್ಲಿವೆ? ಯಾವ ಅಲಮಾರಾದ ಗಂಟಿನಲ್ಲಿವೆ ಎಂಬ ವಿವರಣೆಯನ್ನು ನಮೂದಿಸುತ್ತಿರುವುದರಿಂದ ಭವಿಷ್ಯದಲ್ಲಿ ರೈತರು ಭೂಮಿಯ ದಾಖಲೆಗಳನ್ನು ಸರಳವಾಗಿ ಪಡೆಯಲು ಇದರಿಂದ ಸಾಧ್ಯವಾಗುತ್ತದೆ.

1952ರಿಂದ ಈವರೆಗಿನ ಎಲ್ಲಾ ದಾಖಲೆಗಳನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಭೂಮಿಗೆ ಸಂಬಂಧಿಸಿದ ಪಹಣಿ, ಭೂಮಂಜೂರಾತಿ ಆದೇಶ, ಕೋರ್ಟ್‌ ಆದೇಶ, ಭೂನ್ಯಾಯ ಮಂಡಳಿ, ಭೂಮಂಜೂರಾತಿ ಸಮಿತಿಯ ನಡಾವಳಿ ಹಾಗೂ ತಾಲ್ಲೂಕಿನ ಭೂಮಿಯ ವ್ಯಾಜ್ಯದಲ್ಲಿನ ಪ್ರಕರಣ ಸಿವಿಲ್ ಕೋರ್ಟ್‌ ಆದೇಶಗಳು, ಸ್ಕೆಚ್ ನಕಾಶೆ, ಹಕ್ಕು ವರ್ಗಾವಣೆ ಮತ್ತು ಇನ್ನಿತರ ದಾಖಲೆಗಳು ಸೇರಿವೆ.

ಕಂದಾಯ ದಾಖಲೆಗಳ ಗಣಕೀಕರಣ ಕೆಲಸ ಕೈಗೆತ್ತಿಕೊಂಡ ಮೇಲೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಉಪವಿಭಾಗಾಧಿಕಾರಿ ಪ್ರಭುರಡ್ಡಿ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಚಿಂಚೋಳಿ ಕಚೇರಿಗೆ ಬಂದು ವೀಕ್ಷಿಸಿ ತಮ್ಮ ಸಂಶಯ ನಿವಾರಿಸಿಕೊಂಡಿದ್ದಾರೆ ಎಂದು ಭೀಮರಡ್ಡಿ ಹುಡೇದ ವಿವರಿಸಿದರು.

ಈವರೆಗೆ 15 ಲಕ್ಷ ಪುಟಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲು ನಮ್ಮ ಸಿಬ್ಬಂದಿ ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆವರೆಗೂ ಪ್ರತಿದಿನ ಶ್ರಮಿಸಿದ್ದಾರೆ ಇದು ಸುಲಭವಲ್ಲ.
–ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ್ ಚಿಂಚೋಳಿ
ಯೋಜನೆ ಸಿದ್ಧತೆ ಮತ್ತು ಅನುಷ್ಠಾನದ ಅವಧಿಯಲ್ಲಿ ಸುಮಾರು 8 ತಿಂಗಳಿನಿಂದ ಒಂದೂ ರಜೆ ಪಡೆಯದೇ ಸಂಬಂಧಿಕರ ಮದುವೆ ಅಂತ್ಯಕ್ರಿಯೆ ಯಾವುದರಲ್ಲೂ ಭಾಗವಹಿಸದೇ ಕೆಲಸ ಮಾಡಿದ್ದೇನೆ.
–ಭೀಮರಡ್ಡಿ ಹುಡೇದ್, ವಿಷಯ ನಿರ್ವಾಹಕ ಭೂದಾಖಲೆ ತಹಶೀಲ್ದಾರ್ ಕಚೇರಿ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.