ADVERTISEMENT

₹7.35 ಲಕ್ಷ ಮೌಲ್ಯದ 18 ಬೈಕ್‌ ಜಪ್ತಿ

ಸಂತೆ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬೈಕ್‌ ಕದಿಯುತ್ತಿದ್ದ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:58 IST
Last Updated 24 ಜನವರಿ 2026, 2:58 IST
ಕಳ್ಳನಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳೊಂದಿಗೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಇದ್ದಾರೆ
ಕಳ್ಳನಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳೊಂದಿಗೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಇದ್ದಾರೆ   

ಕಲಬುರಗಿ: ಸಂತೆ, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಲಾಕ್‌ ಮುರಿದು ಬೈಕ್‌ಗಳ ಕದಿಯುತ್ತಿದ್ದ ಕಳ್ಳನನ್ನು ಬಂಧಿಸಿರುವ ಜಿಲ್ಲಾ ಪೊಲೀಸರು, ಆತನಿಂದ ₹7.35 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

‘ಅಫಜಲಪುರ ತಾಲ್ಲೂಕಿನ ಬಡದಾಳ ತಾಂಡಾದ ನಿವಾಸಿ, ಅಂತರರಾಜ್ಯ ಕಳ್ಳ ಸಂಜಯ ಖೇಮು ಚವ್ಹಾಣ (46) ಬಂಧಿತ ಆರೋಪಿ. ಆತನಿಂದ ಎರಡು ರಾಯಲ್‌ ಎನ್‌ಫೀಲ್ಡ್‌, ಒಂದು ಕರಿಷ್ಮಾ ಬೈಕ್‌, ಒಂದು ಸ್ಕೂಟರ್‌ ಸೇರಿದಂತೆ ವಿವಿಧ ಕಂಪನಿಗಳ 18 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದ ದೇವಸ್ಥಾನದ ಬಳಿಕ ನಿಲ್ಲಿಸಿದ್ದ ಬೈಕ್‌ ಕಳುವಾದ ಬಗೆಗೆ ವ್ಯಕ್ತಿಯೊಬ್ಬರು ರೇವೂರ ಠಾಣೆಗೆ ದೂರು ನೀಡಿದ್ದರು. ಆ ಪ್ರಕರಣದ ತನಿಖೆಗೆ ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲರು ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು’ ಎಂದರು.

ADVERTISEMENT

‘ಅತನೂರನಲ್ಲಿ ಕಳುವಾಗಿದ್ದ ಬೈಕ್‌ ಅನ್ನು ಸಂಜಯ ಖುದ್ದು ಓಡಿಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ವಿಚಾರಣೆ ನಡೆಸಿದಾಗ ಆರೋಪಿಯು ಕಲಬುರಗಿ ನಗರದ ಸ್ಟೇಷನ್‌ ಬಜಾರ್‌ ಸೇರಿದಂತೆ ಅಫಜಲಪುರ, ಅತನೂರ ಗ್ರಾಮ, ವಿಜಯಪುರ ಜಿಲ್ಲೆಯ ಇಂಡಿ, ಸಾಲೋಟಗಿ, ಬೆಂಗಳೂರು ನಗರ ಹಾಗೂ ಮಹಾರಾಷ್ಟ್ರದ ದುಧನಿ, ಅಕ್ಕಲಕೋಟೆ ಸೇರಿದಂತೆ ಹಲವೆಡೆ ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ವಿವರಿಸಿದರು.

‘ಸಂಜಯ ಸಂತೆ, ಬಸ್‌ ನಿಲ್ದಾಣ, ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ. ಕದ್ದ ಬೈಕ್‌ಗಳ ಪೈಕಿ ಎರಡು ರಾಯಲ್‌ ಎನ್‌ಫೀಲ್ಡ್‌, ಕರಿಷ್ಮಾ ಹಾಗೂ ಸ್ಕೂಟರ್‌ ಮಾರಲು ತನ್ನ ಪರಿಚಯದ ಮಲ್ಲಾಬಾದ ಗ್ರಾಮದ ಪರಶುರಾಮ ಅಲಿಯಾಸ್‌ ಸುನೀಲ ಜಮಾದಾರ ಎಂಬಾತನಿಗೆ ಕೊಟ್ಟಿದ್ದ. ಇನ್ನುಳಿದ ಬೈಕ್‌ಗಳನ್ನು ಆರೋಪಿ ಹೊಲದಲ್ಲಿ ಶೆಡ್‌ವೊಂದರಲ್ಲಿ ಇರಿಸಿದ್ದ. ಎಲ್ಲ ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದರು. 

‘ಒಟ್ಟು 18 ಬೈಕ್‌ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ವಿವಿಧೆಡೆ ಎಂಟು ಪ್ರಕರಣಗಳು ದಾಖಲಾಗಿವೆ. ಇನ್ನುಳಿದ 10 ಬೈಕ್‌ಗಳ ಮಾಹಿತಿ ಇನ್ನಷ್ಟೇ ಕಲೆಹಾಕಬೇಕಿದೆ. ಆರೋಪಿ ಸಂಜಯ ಮೇಲೆ ರಾಯಚೂರಿನ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು ಬಿಟ್ಟರೆ ಸದ್ಯಕ್ಕೆ ಮತ್ತಾವುದೇ ಪ್ರಕರಣ ಕಂಡು ಬಂದಿಲ್ಲ. ಪರಶುರಾಮ ಮೇಲೆ ಯಾವುದೇ ಪ್ರಕರಣ ಕಂಡು ಬಂದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ, ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ, ರೇವೂರ ಪಿಎಸ್‌ಐ ವಾತ್ಸಲ್ಯ ಇದ್ದರು.

ಆರೋಪಿ ಸಂಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.