ADVERTISEMENT

‘ಬಿಸಿಯೂಟ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿ’

ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 9:38 IST
Last Updated 18 ಅಕ್ಟೋಬರ್ 2019, 9:38 IST
ಎಲ್‌ಐಸಿ ಮೂಲಕ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಿಸಿಯೂಟ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಎಲ್‌ಐಸಿ ಮೂಲಕ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಿಸಿಯೂಟ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಮೂಲಕ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಬದಿಗಿಟ್ಟು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌ ಪಿಂಚಣಿ ಯೋಜನೆಗೆ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶ ಆಘಾತಕಾರಿಯಾಗಿದೆ. ಇದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ನೂರಾರು ಬಿಸಿಯೂಟ ಕಾರ್ಯಕರ್ತೆಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಮ್ಮ ಬೇಡಿಕೆಗೆ ಮಣಿದಿದ್ದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌ಐಸಿ ಮೂಲಕ ಪಿಂಚಣಿ ಯೋಜನೆ ಜಾರಿಗೊಳಿಸಲು ಮೌಖಿಕ ಒಪ್ಪಿಗೆ ಸೂಚಿಸಿದ್ದರು. ಆದರೆ, ಸೆ 19ರಂದು ಪ್ರಧಾನಮಂತ್ರಿ ಪಿಂಚಣಿ ಯೋಜನೆಗೆ ಒಳಪಡಿಸುವ ಆದೇಶ ಹೊರಡಿಸಿದೆ. ಯಾವುದಕ್ಕೂ ಪ್ರಯೋಜನವಾಗದ ಈ ಆದೇಶವನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತೇವೆ. ಡಿಸೆಂಬರ್‌ ಮೊದಲ ವಾರದಲ್ಲಿ ರಾಜ್ಯಮಟ್ಟದ ಹೋರಾಟ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದರು.

ರಾಜ್ಯದ 1.18 ಲಕ್ಷ ಮಹಿಳೆಯರು ಈ ಯೋಜನೆಯಡಿ ದುಡಿಯುತ್ತಿದ್ದಾರೆ. ಅವರಿಗೆ ಕೇವಲ ₹ 2,600 ಸಂಬಳ ಸಿಗುತ್ತಿದೆ. ಇದನ್ನು ಹೊರತುಪಡಿಸಿ ಬೇರಾವ ಸವಲತ್ತುಗಳೂ ಸಿಗುವುದಿಲ್ಲ. ಅವರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದು, ಪಿಂಚಣಿ ಯೋಜನೆಯನ್ನು ಸಂಘವು ಬೇಡಿಕೆ ಇಟ್ಟಂತೆತೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಾಕಿ ನೀಡಲು ಒತ್ತಾಯ: ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಕಳೆದ ಜನವರಿಯಿಂದ ಸೆಪ್ಟೆಂಬರ್‌ವರೆಗಿನಅಡುಗೆ ಸಿಬ್ಬಂದಿ ಸಂಭಾವನೆ ಹಾಗೂ ಸಾದಿಲ್ವಾರು ಬಾಕಿ ಇದೆ. ದಿನೇ ದಿನೇ ಬೆಲೆ ಏರಿಕೆ ಆಗುತ್ತಿದ್ದು, ಬಡ ನೌಕರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಮಾಡಿದರು.

ಸಂಘಟನೆ ಗೌರವಾಧ್ಯಕ್ಷ ಗೌರಮ್ಮ ಪಾಟೀಲ, ಅಧ್ಯಕ್ಷೆ ರೇಖಾ ಸುತಾರ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಹಿರೇಮಠ, ಅಫಜಲಪುರ ತಾಲ್ಲೂಕು ಘಟಕದ ಅಧ್ಯಕ್ಷೆ ಸಿದ್ದಮ್ಮ ಭೈರಾಮಡಗಿ, ಚಿತ್ತಾಪುರ ತಾಲ್ಲೂಕಿನ ಸಂಗೀತಾ ಗುತ್ತೇದಾರ, ಆಳಂದದ ರೇಖಾ ರಂಗನ್, ಸುಲೋಚನಾ ಸನ್‌ಬಾಳ, ಜೇವರ್ಗಿಯ ನಾಗಮ್ಮ, ಚಿಂಚೋಳಿಯ ಸಾವಿತ್ರಿ, ಶಹಾಬಾದ್‌ನ ಸಂಪತ್‌ ಕುಮಾರಿ, ಗುಲಬರ್ಗಾದ ಕವಿತಾ, ಸೇಡಂನ ಸಿದ್ದಮ್ಮ, ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.