
ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ರಶೀದ್ ಮುತ್ಯಾ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸಿಪಿಐ ರಾಜೇಸಾಬ ನದಾಫ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಜೇವರ್ಗಿ: ‘ತಾಲ್ಲೂಕಿನ ನಾರಾಯಣಪುರ ಗ್ರಾಮದ ರಶೀದ್ ದಸ್ತಗೀರ್ ಇನಾಮದಾರ್ ಮುತ್ಯಾ ಎಂಬುವರು ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಮೋಸಗೊಳಿಸುತ್ತಿದ್ದು, ತಕ್ಷಣ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸೋಮವಾರ ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಸಾಬ ನದಾಫ್ ಅವರ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘ವಿಶೇಷವಾಗಿ ಬಡ ಮತ್ತು ಮುಗ್ಧ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಾ, ಸುಳ್ಳು ಭರವಸೆ ನೀಡಿ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತೆ, ಕಷ್ಟ ದೂರವಾಗುತ್ತೆ, ದೇವರ ಆಶೀರ್ವಾದ ಕೊಡುತ್ತೇನೆ ಎಂದು ಜನರಿಂದ ಹಣ, ಆಭರಣ ಮತ್ತು ವ್ಯಯಕ್ತಿಕ ಲಾಭ ಪಡೆಯುತ್ತಿದ್ದಾರೆ’ಎಂದು ಆರೋಪಿದ್ದಾರೆ.
‘ಮಹಿಳೆಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಾ, ಅವಮಾನ ಮಾಡುತ್ತಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಘಟನೆಗಳಿಂದ ಗ್ರಾಮದ ಜನರಲ್ಲಿ ಭಯ, ಮೂಢನಂಬಿಕೆ ಮತ್ತು ಅಶಾಂತಿ ಹೆಚ್ಚಾಗಿದೆ. ಅವರ ಕೃತ್ಯಗಳು ಮಾನವೀಯತೆ ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ಧವಾಗಿವೆ. ಆದ್ದರಿಂದ ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು’ ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಭಾಗೇಶ ಹೋತಿನಮಡು, ಅನೀಲ ದೊಡ್ಡಮನಿ, ಹಿಂದೂ ಪರ ಸಂಘಟನೆಯ ಮುಖಂಡ ಈಶ್ವರ ಹಿಪ್ಪರಗಿ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.