ಕಲಬುರಗಿ: ‘ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ದಿಗ್ಬಂಧನದಲ್ಲಿ ಇರಿಸಲು ಸಹಕರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರ ವಿರುದ್ಧ ದಾಖಲಿಸಿರುವ ಅಟ್ರಾಸಿಟಿ ಪ್ರಕರಣವನ್ನು ರದ್ದು ಮಾಡಬೇಕು’ ಎಂದು ಜಿಲ್ಲಾ ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡ ಅಂಬಾರಾಯ ಅಷ್ಟಗಿ ಒತ್ತಾಯಿಸಿದರು.
‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ವೈಫಲ್ಯವನ್ನು ಖಂಡಿಸುತ್ತಿರುವ ದಲಿತ, ಹಿಂದುಳಿದ ವರ್ಗಗಳ ನಾಯಕರನ್ನು ಮಟ್ಟ ಹಾಕುವ ಪ್ರಯತ್ನವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡುತ್ತಿದ್ದಾರೆ. ಹೀಗಾಗಿ, ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ದಲಿತ ಸಮುದಾಯದ ಹೋರಾಟಗಾರ ಡಿ.ಜಿ. ಸಾಗರ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನದ ಆಸೆಯಿಂದಾಗಿ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿರುವ ದಲಿತ ನಾಯಕರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಅವರನ್ನು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿಯೂ ಮಾಡುವುದಿಲ್ಲ’ ಎಂದರು.
‘ದೇಶದಾದ್ಯಂತ ದಾಖಲಾಗುತ್ತಿರುವ ಅಟ್ರಾಸಿಟಿ ಪ್ರಕರಣಗಳಲ್ಲಿ ಶೇ 60ರಷ್ಟು ಸರಿಯಾದ ಸಾಕ್ಷಾಧಾರ ಇಲ್ಲದೆ ಬಿದ್ದು ಹೋಗುತ್ತಿವೆ. ಅಟ್ರಾಸಿಟಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಕೂಗು ಸಹ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿರೋಧ ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡು ಸುಳ್ಳು ಅಟ್ರಾಸಿಟಿ ಪ್ರಕರಣ ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.
‘ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದಲ್ಲಿ ದಿಗ್ಬಂಧನದಲ್ಲಿ ಇರಿಸಿದ್ದವರ ಮನವೊಲಿಸಲು ತೆರಳಿದ್ದಾಗ ನನ್ನ ಮೇಲೆ ಅರುಣ ಯಾಗಾಪುರ, ನಾಗರಾಜ ಕಲ್ಲಕ, ಉದಯ ಸಾಗರ, ರಫಿಕ್ ಸೇರಿದಂತೆ ಇತರರು ಹಲ್ಲೆ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿಲ್ಲ’ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಿಶಾಲ್ ದರ್ಗಿ, ಬಸವರಾಜ ಬೆಣ್ಣೂರ, ಗಣೇಶ ವಳಕೇರಿ, ಶಶಿಧರ ಸೂಗೂರ, ಅವ್ವಣ್ಣ ಮ್ಯಾಕೇರಿ, ಕ್ಷತ್ರು ರಾಠೋಡ, ಮಲ್ಲಿನಾಥ ಪಾಟೀಲ, ಗಿರೀಶ ಭಜಂತ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.