ಕಲಬುರಗಿ: ‘ಬಿಜೆಪಿಯವರು ತಮ್ಮ ಕಚೇರಿಗಳನ್ನು ಕಟ್ಟಿಸಲು ₹300 ಕೋಟಿಯಿಂದ ₹400 ಕೋಟಿ ಖರ್ಚು ಮಾಡುತ್ತಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ಬಂತು? ಅವರ ಪಕ್ಷಕ್ಕೆ ಹೆಚ್ಚು ದೇಣಿಗೆ ಸಂಗ್ರಹವಾಗುತ್ತಿರುವುದು ಹೇಗೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಐಟಿ, ಇಡಿಯನ್ನು ಅವರ ಕಚೇರಿಗೇ ಕಳಿಸುತ್ತೇವೆ’ ಎಂದೂ ಅವರು ಹೇಳಿದರು.
‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿದ್ದರು. ಅದನ್ನು ನಂತರ ಬಂದ ಸರ್ಕಾರ ವಾಪಸ್ ತೆಗೆದುಕೊಂಡು ತಪ್ಪು ಮಾಡಿದೆ ಎನಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ನಿಷೇಧಿಸಲಿದೆ’ ಎಂದ ಅವರು, ‘ಬಿಜೆಪಿಯು ಆರ್‌ಎಸ್‌ಎಸ್‌ನ ಚೇಲಾ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಮುಖಂಡರು ವಿಧಾನಸಭೆಯಲ್ಲಿ ಕುಳಿತಿದ್ದಾರೆ. ಬಿಜೆಪಿ ಎಂದಿಗೂ ಸಾಮಾಜಿಕ ಸಮಾನತೆ, ಜಾತ್ಯತೀತ ಮೌಲ್ಯಗಳನ್ನು ಒಪ್ಪಿಲ್ಲ. ಅದಕ್ಕಾಗಿಯೇ ಸಂವಿಧಾನದಲ್ಲಿನ ಜಾತ್ಯತೀತ, ಸಮಾಜವಾದಿ ಪದಗಳನ್ನು ತೆಗೆಯುವಂತೆ ಬೇಡಿಕೆ ಇಟ್ಟಿದೆ. ಆದರೆ, ಬಿಜೆಪಿಯ ಸಂವಿಧಾನದಲ್ಲಿಯೇ ಈ ಅಂಶಗಳಿವೆ ಎಂಬುದನ್ನು ಆ ಪಕ್ಷದ ನಾಯಕರು ಮರೆತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.