ADVERTISEMENT

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು, ಕಾರ್ಯಕರ್ತರ ಪ್ರತಿಭಟನೆ; ರಸ್ತೆ ಸಂಚಾರ ತಡೆದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 6:54 IST
Last Updated 23 ಆಗಸ್ಟ್ 2024, 6:54 IST
ಕಲಬುರಗಿಯಲ್ಲಿ ಬಿಜೆಪಿ ನಾಯಕರು ಉಪವಿಭಾಗಾಧಿಕಾರಿ ರೂಪಿಂದರ್ ಕೌರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಕಲಬುರಗಿಯಲ್ಲಿ ಬಿಜೆಪಿ ನಾಯಕರು ಉಪವಿಭಾಗಾಧಿಕಾರಿ ರೂಪಿಂದರ್ ಕೌರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಕಲಬುರಗಿ: ‘ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕಾಗಿ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ. ಅವರಿಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕ ಹಾಗೂ ನಗರ ಘಟಕದಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು– ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ‌ಕಚೇರಿ ತನಕ ಮೆರವಣಿಗೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಮಾನವರ ಸರಪಳಿ ನಿರ್ಮಿಸಿ, ಸುಮಾರು 40 ನಿಮಿಷಗಳ ಕಾಲ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು‌ ಆಕ್ರೋಶ ‌ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ನಾಯಕರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ಕೆಕೆಆರ್‌ಟಿಸಿ ಮಾಜಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ‘ಈ ಹಿಂದೆ ಯಡಿಯೂರಪ್ಪ ವಿರುದ್ಧ ಆಗಿನ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ಆಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ರಾಜ್ಯಪಾಲರ ನಿರ್ಧಾರ ಸರಿ ಎಂದಿದ್ದರು. ಈಗೇಕೆ ರಾಜ್ಯಪಾಲರ ನಿರ್ಧಾರ ವಿರೋಧಿಸುತ್ತಿದ್ದಾರೆ? ಇದಕ್ಕೆ ಏನು ಹೇಳುತ್ತೀರಿ ಸಿದ್ದರಾಮಯ್ಯ ಅವರೇ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರೇ ಸಮಾಜವಾದಿ ಎಂದು ಹೇಳಿ ಮಜಾವಾದಿಯಾಗಿದ್ದೀರಿ. ಅಹಿಂದ ಎಂದು ಹೇಳಿಕೊಂಡು ಹಿಂದುಳಿದವರ, ಪರಿಶಿಷ್ಟರ ಕಲ್ಯಾಣದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದೀರಿ. ಇದೀಗ ಮುಡಾ ಹಗರಣ ನಡೆಸಿದ್ದೀರಿ. ನೈತಿಕ ಹೊಣೆ ಹೊತ್ತು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಹೊರ ನಡೆಯಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಮಾತನಾಡಿ, ‘ರಾಜ್ಯ ಕಾಂಗ್ರೆಸ್ ಸರ್ಕಾರ ತುಘಲಕ ದರ್ಬಾರ್ ನಡೆಸುತ್ತಿದೆ. ಸರಣಿ ಹಗರಣ ನಡೆಸುತ್ತಿದೆ. ಸಚಿವರ ಬೆನ್ನಲ್ಲೆ ಇದೀಗ ಸ್ವತಃ ಮುಖ್ಯಮಂತ್ರಿ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಮಾನ ಉಳಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ‘ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ. ಅದಕ್ಕಿಂತಲೂ ದೊಡ್ಡ ಸಾಂವಿಧಾನಿಕ ಹುದ್ದೆ ರಾಜ್ಯಪಾಲರದ್ದು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕಾಗಿ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಟೀಕಿಸುವುದು ಸರಿಯಲ್ಲ. ಸಂವಿಧಾನವನ್ನು ಕಾಂಗ್ರೆಸ್ ಗೌರವಿಸುವುದೇ ಆದರೆ, ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ‌ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಅಂಬರಾಯ ಅಷ್ಠಗಿ, ನಿತಿನ್‌ ಗುತ್ತೇದಾರ, ಶೋಭಾ ಬಾನಿ, ಸುಧಾ ಹಾಲಕಾಯಿ, ರಾಜು ವಾಡೇಕರ, ಅಂಬಾರಾಯ ಚಲಗೇರಿ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಪ ವಿಭಾಗಾಧಿಕಾರಿ ರೂಪಿಂದರ್ ಸಿಂಗ ಕೌರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಸಂಚಾರ ಮಾರ್ಗ ಬದಲು: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರಿಂದ ತಿಮ್ಮಾಪುರಿ ವೃತ್ತದಿಂದ ಜಗತ್ ವೃತ್ತದತ್ತ ಸಾಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಬಳಿಕ ಪೊಲೀಸರು ತಿಮ್ಮಾಪುರಿ ವೃತ್ತದಿಂದ ವಾಹನಗಳನ್ನು ಜಿಲ್ಲಾ ಕೋರ್ಟ್ ಎದುರಿನಿಂದ ಲಾಹೋಟಿ ಪೆಟ್ರೋಲ್ ಬಂಕ್‌ ರಸ್ತೆಯ ಮೂಲಕ ಹೋಗುವಂತೆ ಕ್ರಮವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.