ಚಿತ್ತಾಪುರ: ‘ಚಿತ್ತಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲು ಸಚಿವ ಪ್ರಿಯಾಂಕ್ ಖರ್ಗೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪೊಲೀಸ್ ಕೇಸ್ ಹಾಕಿಸಿ ಕ್ಷೇತ್ರದತ್ತ ಬರದಂತೆ ಮಾಡುತ್ತಿದ್ದಾರೆ. ಮತಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಬಾಬುರಾವ್ ಚವ್ಹಾಣ ಅವರು ಆರೋಪಿಸಿದರು.
ಪಟ್ಟಣದ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ ಹಾಗೂ ಬೂತ್ ಮಟ್ಟದ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಅಧಿಕಾರ ಮತ್ತು ರಾಜಕೀಯ ಶಾಶ್ವತವಲ್ಲ ಎಂದು ಪ್ರಿಯಾಂಕ್ ಅವರು ತಿಳಿದುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಪ್ರಿಯಾಂಕ್ ಅವರ ಸೋಲು ಖಚಿತ’ ಎಂದರು.
ದಬ್ಬಾಳಿಕೆಗೆ ಕಾರ್ಯಕರ್ತರು ಹೆದರಬಾರದು. ನಿಮ್ಮ ಏನೇ ಸಮಸ್ಯೆ, ತೊಂದರೆ ಇದ್ದರೆ ನಡುರಾತ್ರಿಯಲ್ಲೂ ಕರೆ ಮಾಡಿ ತಿಳಿಸಿ. ನಿಮ್ಮೊಂದಿಗೆ ಪಕ್ಷ ಸದಾ ಇರಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕು. ಈಗಲೇ ಸೂಕ್ತ ಅಭ್ಯರ್ಥಿಯನ್ನು ಗುರುತಿಸುವ ಕೆಲಸ ಆರಂಭಿಸಬೇಕು’ ಎಂದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ವಿಧಾನಸಭೆ ಅಧಿವೇಶನ ಮುಗಿದ ನಂತರ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾಗಲಿದೆ. ಬರುವ ದಿನಗಳಲ್ಲಿ ಸಮರ್ಥ ನಾಯಕತ್ವ ನೀಡುವವರು ಕ್ಷೇತ್ರಕ್ಕೆ ಬರಲಿದ್ದಾರೆ. ಬಿಜೆಪಿ ಬಾವುಟ ಹಾರಲಿದೆ’ ಎಂದರು.
ಕಾರ್ಯಕ್ರಮವನ್ನು ಕ್ಯಾಪ್ಟನ್ ಗಣೇಶ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ ಬಗಲಿ, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿದರು. ನೂತನ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ನೀಲಕಂಠ ಪಾಟೀಲ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.
ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಮಾಲಗತ್ತಿ ಸೇರಿದಂತೆ ಎಲ್ಲಾ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಬಿಜೆಪಿ ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಲಿಂಗರಾಜ ಬಿರಾದಾರ, ಶಶಿಕಲಾ ತೆಂಗಳಿ, ಸೋಮಶೇಖರ ಪಾಟೀಲ ಬೆಳಗುಂಪಾ, ಚಂದ್ರಶೇಖರ ಅವಂಟಿ, ಬಸವರಾಜ ಬೆಣ್ಣೂರಕರ್, ಶಿವಲಿಂಗಪ್ಪಾ ವಾಡೇದ್, ವಿಠಲ್ ವಾಲ್ಮೀಕ ನಾಯಕ, ಶರಣಗೌಡ ಭೀಮನಳ್ಳಿ, ನಾಗುಬಾಯಿ ಜಿತುರೆ, ನಾಗರಾಜ ಭಂಕಲಗಿ, ಆನಂದ ಪಾಟೀಲ ನರಿಬೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.