ಕಲಬುರ್ಗಿ: ‘ಬೋಯಿಂಗ್ ಇಂಡಿಯಾ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ರಾಜ್ಯಕ್ಕೆ ನೀಡಲಿರುವ 250 ಬೆಡ್‌ಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಲಬುರ್ಗಿಗೆ ಮಂಜೂರು ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಘೋಷಿಸಿದರು.
‘ಅಷ್ಟೂ ಬೆಡ್‌ಗಳಿಗೆ ಆಮ್ಲಜನಕದ ವ್ಯವಸ್ಥೆ ಇರಲಿದ್ದು, ಮುಂದಿನ 6 ತಿಂಗಳಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಅದಕ್ಕಾಗಿ ಜಿಲ್ಲಾಡಳಿತದ ಬಳಿ ಇರುವ ಜಾಗ ಪತ್ತೆ ಮಾಡಲಾಗುವುದು. ಮತ್ತೊಂದು ಆಸ್ಪತ್ರೆ ಯಲಹಂಕದಲ್ಲಿ ನಿರ್ಮಾಣಗೊಳ್ಳಲಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಒಟ್ಟು 1600 ಬೆಡ್‌ಗಳಿವೆ. ಅವುಗಳಲ್ಲಿ 440 ಬೆಡ್‌ಗಳು ಆಮ್ಲಜನಕ ವ್ಯವಸ್ಥೆ ಹೊಂದಿದ್ದರೆ, 378 ಬೆಡ್‌ಗಳು ಐಸಿಯು ಘಟಕದಲ್ಲಿವೆ. ಜಿಮ್ಸ್ ಆಸ್ಪತ್ರೆ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಬಳಸಿಕೊಂಡು, ಅಲ್ಲಿ ಒಟ್ಟಾರೆ 500 ಬೆಡ್‌ಗಳನ್ನು ಹಾಕಲಾಗುವುದು’ ಎಂದರು.
‘ದಿನದಿಂದ ದಿನಕ್ಕೆ ಆಮ್ಲಜನಕದ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ವಾರದ ವೇಳೆಗೆ 30 ಕೆಎಲ್ ಆಮ್ಲಜನಕ ಅಗತ್ಯವಿದ್ದು, ಅದನ್ನು ಸರಿದೂಗಿಸಲು ಈಗಿರುವ ಟ್ಯಾಂಕರ್‌ಗಳ ಜೊತೆಗೆ ಜಿಲ್ಲೆಗೇ ಹೊಸದಾಗಿ ಒಂದು ಆಮ್ಲಜನಕ ಸಂಗ್ರಹಿಸುವ ಟ್ಯಾಂಕರ್ ಖರೀದಿಗೆ ನಿರ್ಧರಿಸಲಾಗಿದೆ. ಕೋವಿಡ್ ಹಾವಳಿ ಕಡಿಮೆಯಾದ ಬಳಿಕ ಇದನ್ನು ಮಾರಬಹುದು’ ಎಂದರು.
‘ಆಮ್ಲಜನಕದ ಬೇಡಿಕೆ ಪೂರೈಸಲು ಮೊದಲ ಹಂತದಲ್ಲಿ 100 ಕಾನ್ಸಂಟ್ರೇಟರ್‌ಗಳು ಸೋಮವಾರ ಜಿಲ್ಲೆಗೆ ಬರಲಿವೆ. ಇದರ ಜೊತೆಗೆ ಕೇಂದ್ರ ಸರ್ಕಾರವು 1 ಲಕ್ಷ ಆಮ್ಲ
ಜನಕದ ಕಾನ್ಸಂಟ್ರೇಟರ್‌ಗಳಿಗೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 3 ಸಾವಿರ ಕಾನ್ಸಂಟ್ರೇಟರ್‌ಗಳಿಗೆ ಕಲಬುರ್ಗಿಗೆ ಲಭ್ಯವಾಗಲಿವೆ’ ಎಂದರು.
ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.
‘ಕಾಳಸಂತೆ ಮಾರಾಟ ನಿಯಂತ್ರಣಕ್ಕೆ ಪೊಲೀಸ್ ತಂಡ’
‘ರೆಮ್‌ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಆಗುವುದನ್ನು ತಡೆಯಲು ಪೊಲೀಸ್ ತಂಡ ರಚಿಸಲಾಗಿದೆ. ಜಿಲ್ಲಾಡಳಿತವು ರೋಗಿಗಳ ವಿವರ ಪಡೆದು ಅವರಿಗೆ 200 ವಯಲ್ಸ್ ರೆಮ್‌ಡಿಸಿವಿರ್ ನೀಡಿದರೆ, ಪೊಲೀಸರು 200 ಜನರಿಗೆ ಕರೆ ಮಾಡಿ ಅವು ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳುವರು’ ಎಂದು ಮುರುಗೇಶ ನಿರಾಣಿ ತಿಳಿಸಿರರು.
‘ರೆಮ್‌ಡಿಸಿವಿರ್ ಇಂಜೆಕ್ಷನ್ ಜಿಲ್ಲೆಗೆ ಅಗತ್ಯವಿದ್ದಷ್ಟು ಬರುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ನೀಗಿಸಲು ಸರ್ಕಾರವು ಮುಧೋಳ ಮೂಲದ ಔಷಧಿ ತಯಾರಿಕ ಕಂಪನಿಗೆ ಇಂಜೆಕ್ಷನ್ ತಯಾರಿಕೆಗೆ ಅನುಮತಿ ನೀಡಿದೆ. ಮೇ 17ರಂದು ಉತ್ಪಾದನೆ ಆರಂಭಗೊಳ್ಳಲಿದೆ. ಮೇ 19ರ ವೇಳೆಗೆ ಇಂಜೆಕ್ಷನ್ ಲಭ್ಯವಾಗಲಿವೆ’ ಎಂದರು.
‘ಬೆಡ್‌ಗಳ ಅಲಭ್ಯತೆ, ಆಮ್ಲಜನಕದ ಸಮಸ್ಯೆ, ರೆಮ್‌ಡಿಸಿವಿರ್ ಅಭಾವವಿದೆ. ಜಿಲ್ಲಾಡಳಿತವೂ ಕೋವಿಡ್ ರೋಗಿಗಳನ್ನು ಬದುಕಿಸಲು ನಿರಂತರ ಪ್ರಯತ್ನ ನಡೆಸಿದೆ’ ಎಂದು ಅವರು ತಿಳಿಸಿದರು.
‘ಜಿಮ್ಸ್; ಬೌನ್ಸರ್‌ಗಳ ತೆರವು’
‘ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರು ಒಳಹೋಗುವುದನ್ನು ತಡೆಯಲು ಬೌನ್ಸರ್‌ಗಳನ್ನು ನೇಮಿಸಿರುವ ಬಗ್ಗೆ ಮಾಹಿತಿ ತಡವಾಗಿ ಗೊತ್ತಾಗಿದೆ. ಅವರು ರೋಗಿಗಳ ಸಂಬಂಧಿಗಳಿಗೆ ಹಲ್ಲೆ ಮಾಡಿರುವ ಮಾಹಿತಿಯೂ ಸಿಕ್ಕಿದೆ. ಅವರ ಬದಲು ಅಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು’ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
‘ರೋಗಿಗಳ ಸಂಬಂಧಿಕರನ್ನು ಕೋವಿಡ್ ವಾರ್ಡ್‌ಗೆ ಬಿಡುವುದರಿಂದ ಅವರಿಗೂ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಒಳಗೆ ಬಿಡುತ್ತಿಲ್ಲ. ರೋಗಿಗಳೊಂದಿಗೆ ವಿಡಿಯೊ ಕಾಲ್ ಮಾಡಿ ಆರೋಗ್ಯ ವಿಚಾರಿಸಲು ಅವಕಾಶ ನೀಡಲಾಗುವುದು. ರೋಗಿಗಳ ಆರೋಗ್ಯ ಮಾಹಿತಿ ನೀಡುವ ಆ್ಯಪ್ ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.