ADVERTISEMENT

‘ಜವಳಿ ಪಾರ್ಕ್‌: ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:43 IST
Last Updated 24 ಡಿಸೆಂಬರ್ 2025, 5:43 IST

ಕಲಬುರಗಿ: ‘ನಾನು ಮುಖ್ಯಮಂತ್ರಿ ಆಗಿದ್ದಾಗ ಕಲಬುರಗಿ ಜಿಲ್ಲೆಯಲ್ಲಿ ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಪಿಎಂ ಮಿತ್ರ ಮೆಗಾ ಟೆಕ್ಸ್‌ ಟೈಲ್ ಪಾರ್ಕ್‌ಗೆ ಅಡಿಗಲ್ಲು ಹಾಕಲಾಗಿದೆ. ಆದರೆ, ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಸಾಕಾರಗೊಳ್ಳುತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಕುರಿತು ಈಗಾಗಲೇ ರಾಜ್ಯದ ಜವಳಿ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಮಾತನಾಡಲಾಗಿದೆ. ಪ್ರಮುಖವಾಗಿ ತಾವು ಸಂಸತ್ತಿನ ಕಾರ್ಮಿಕ, ಜವಳಿ ಮತ್ತು ಕೌಶಲಾಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಹೀಗಾಗಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ಸಭೆ ನಡೆಸಲಾಗುವುದು’ ಎಂದರು.

‘ರಾಜ್ಯ ಸರ್ಕಾರದ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ತಡೆ ಮಸೂದೆಯು ದಮನಕಾರಿಯಾದ ಕಾನೂನು. ದ್ವೇಷ ಭಾಷಣ ಏನು ಎಂಬುದರ ವ್ಯಾಖ್ಯಾನ ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಹೀಗಾಗಿ ಯಾರನ್ನು ಯಾವಾಗ ಬೇಕಾದರೂ ಒಳಗೆ ಹಾಕಬಹುದಾದಂತಹ ಕಾನೂನು ಇದಾಗಿದೆ. ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುಡುವ ಕೆಲಸ ಇದಾಗಿದೆ' ಎಂದು ‌ಬಸವರಾಜ‌್ ಬೊಮ್ಮಾಯಿ ಟೀಕಿಸಿದರು.

ADVERTISEMENT

ದ್ವೇಷ ಭಾಷಣ ಮಾಡದೆ ಇದ್ರೆ ಬಿಜೆಪಿಯವರಿಗೆ ಯಾಕೆ ಭಯ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ರಾಜಕೀಯ ಹೆಗತನ ಸಾಧಿಸುವ ಸರ್ಕಾರ ಇದ್ದಾಗ ಇದು ಬಹಳ ದುರುಪಯೋಗ ಆಗುತ್ತೆ. ಕಾನೂನು ಯಾರ ಕೈಯಲ್ಲಿ ಇದೆ ಎಂಬುದು ಬಹಳ ಮುಖ್ಯವಾಗಿದೆ.
ಈ ಸರ್ಕಾರವನ್ನು ಯಾವುದೇ ರೀತಿ ಪ್ರಶ್ನೆ ಮಾಡಬಾರದು ಎಂಬುದು ಇದರ ಉದ್ದೇಶ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.