
ಸೇಡಂ: ‘ಸಾಹಿತ್ಯ ಬರೆಯುವವರಿಗೆ ಕೊಡಮಾಡುವ ಪ್ರಶಸ್ತಿಗಳು ಅವರ ಜವಾಬ್ದಾರಿ ಹೆಚ್ಚಿಸುವುದರ ಜೊತೆಗೆ ಪುಸ್ತಕ ಸಂಸ್ಕೃತಿ ಪರಂಪರೆಯನ್ನು ಬೆಳೆಸಲು ಪ್ರೇರಣದಾಯಿಯಾಗಿವೆ. ಅದರಲ್ಲಿ ಅಮ್ಮ ಪ್ರಶಸ್ತಿಯೂ ಒಂದಾಗಿದೆ’ ಎಂದು ಕನ್ನಡ ಚಲನಚಿತ್ರ ಹಿರಿಯ ಕಲಾವಿದ ಕೆ.ವಿ.ಶ್ರೀನಿವಾಸಪ್ರಭು ಅಭಿಪ್ರಾಯಪಟ್ಟರು.
ಪಟ್ಟಣದ ಪಂಚಲಿಂಗೇಶ್ವರ ದೇವಾಲಯದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ‘ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಒಂದು ಕವಿತೆ, ಲೇಖನ, ಪುಸ್ತಕ ಬದುಕನ್ನೇ ಬದಲಿಸುವ ಶಕ್ತಿಯಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಹಿಪಾಲರೆಡ್ಡಿ ಮುನ್ನೂರ ಅವರು 25 ವರ್ಷಗಳಿಂದ ಅಮ್ಮ ಪ್ರಶಸ್ತಿ ಕೊಡುತ್ತಿರುವುದು ಶ್ಲಾಘನೀಯ. ಅಮ್ಮ ಎಲ್ಲರ ನಂದಾದೀಪವಾಗಿದ್ದು, ಅಮ್ಮ ಎಲ್ಲರ ಅಮ್ಮವೂ ಹೌದು’ ಎಂದರು.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಮಾತನಾಡಿ, ‘ನೆಲ–ಜಲ, ಭಾಷೆ, ಸಾಹಿತ್ಯದ ವಿಷಯ ಬಂದಾಗ ಕಲ್ಯಾಣ ಕರ್ನಾಟಕ ಭಾಗದ ಜನ ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದಾರೆ. ಪತ್ರಕರ್ತರು ತಮ್ಮ ವೃತ್ತಿಯ ಜೊತೆಗೆ ನಿತ್ಯ ಸಾಹಿತಿಯಾಗಿದ್ದು, ಸಾಹಿತ್ಯ ಪ್ರಕಟಿಸುತ್ತಾರೆ’ ಎಂದು ಹೇಳಿದರು.
‘ಹಲವು ವರ್ಷಗಳಿಂದ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಕಲ್ಯಾಣ ಕರ್ನಾಟಕದವರು ಆಯುಕ್ತರಾಗಿರಲಿಲ್ಲ. ಈಗ ನನಗೆ ಸಿಕ್ಕ ಅವಕಾಶವನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಬದ್ಧನಾಗಿದ್ದೇನೆ’ ಎಂದು ತಿಳಿಸಿದರು.
ಸ್ತ್ರೀರೋಗ ತಜ್ಞೆ ಡಾ. ಭಾಗ್ಯಶ್ರೀ ಪಾಟೀಲ ಮಾತನಾಡಿ, ‘ಅಮ್ಮ ಎನ್ನುವ ಪದ ಮನಮುಟ್ಟುವ ಪದವಾಗಿದೆ. ಮನಸ್ಸಿನ ಆಳ ಅರಿಯುವ ಅಂತರಾತ್ಮದ ಭಾವನೆ ಅಮ್ಮನಿಗಿದೆ. ಸಾಹಿತಿಗಳಿಗೆ ಅಮ್ಮ ಪ್ರಶಸ್ತಿ ಕೊಡಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಗೀತಾ ವಸಂತ, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಬಸವರಾಜ ಸಾದರ ಅನಿಸಿಕೆ ಹಂಚಿಕೊಂಡರು. ಸಮೀಕ್ಷಾ ಕುಲಕರ್ಣಿ ಪ್ರಾರ್ಥಿಸಿದರು. ಸಿದ್ದಪ್ರಸಾದರೆಡ್ಡಿ ಮುನ್ನೂರ ಸ್ವಾಗತಿಸಿದರು. ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು.
25ನೇ ವರ್ಷದ ಅಮ್ಮ ಪ್ರಶಸ್ತಿ
ಪುರಸ್ಕೃತರು ಗೀತಾ ವಸಂತ ಸದಾಶಿವ ಸೊರಟೂರ(ಕಾವ್ಯ) ವಿಜಯಶ್ರೀ ಹಾಲಾಡಿ ಆನಂದ ಕುಂಚನೂರ(ಕಥೆ) ಸುನಂದಾ ಕಡಮೆ ಮುದಿರಾಜ ಬಾಣದ(ಕಾದಂಬರಿ) ಚಂದ್ರಶೇಖರ ಮದಬಾವಿ(ಸಂಕೀರ್ಣ) ಬಸವರಾಜ ಸಾದರ ಸದಾನಂದ ಪಾಟೀಲ(ಪ್ರಬಂಧ ಸಂಕಲನ) ಅರುಣಾ ನರೇಂದ್ರ (ಮಕ್ಕಳ ಸಾಹಿತ್ಯ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮ್ಮ ಪ್ರಶಸ್ತಿ ಗೌರವ ಸತ್ಕಾರ ₹2500 ನಗದು ಪುರಸ್ಕಾರ ಮತ್ತು ತೊಗರಿ ಬೇಳೆ ನೀಡಲಾಯಿತು. ನಾಗಪ್ಪ ಮುನ್ನೂರ ಸ್ಮರಣಾರ್ಥ ಅಶ್ವಿನಿ ಕಾಶಮ್ಮ ಅವರಿಗೆ ಹೊಲಿಗೆಯಂತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.