ADVERTISEMENT

‘ನಾಡು, ನುಡಿ ಬಿಂಬಿಸುವ ‘ಕವಿಜನ ಮಾರ್ಗ’

ಸಂಪಾದಕ ಮಂಡಳಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:37 IST
Last Updated 6 ಸೆಪ್ಟೆಂಬರ್ 2020, 16:37 IST
ಕಲಬುರ್ಗಿಯ ಕನ್ನಡ ಭವನದ ಸುವರ್ಣಸೌಧದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಪಾದಕ ಮಂಡಳಿ ಸದಸ್ಯರಿಗೆ ಸ್ಮರಣ ಸಂಚಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು
ಕಲಬುರ್ಗಿಯ ಕನ್ನಡ ಭವನದ ಸುವರ್ಣಸೌಧದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಪಾದಕ ಮಂಡಳಿ ಸದಸ್ಯರಿಗೆ ಸ್ಮರಣ ಸಂಚಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು   

ಕಲಬುರ್ಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಕವಿಜನ ಮಾರ್ಗ’ವು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಅತ್ಯಮೂಲ್ಯ ಗ್ರಂಥವಾಗಿದೆ ಎಂದು ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಡಾ.ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ‘ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಪಾದಕ ಮಂಡಳಿ ಸದಸ್ಯರಿಗೆ ಸ್ಮರಣ ಸಂಚಿಕೆ ಸಮರ್ಪಣೆ ಹಾಗೂ ಸನ್ಮಾನ ಸಮಾರಂಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಂಥ ಸಂಪಾದನೆಗೂ ಮುನ್ನ 38 ಪೂರ್ವಭಾವಿ ಸಭೆಗಳನ್ನು ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳ ಹಿರಿಯ ಸಾಹಿತಿಗಳಿಂದ ಲೇಖನ ತರಿಸಿಕೊಂಡು 650ಕ್ಕೂ ಹೆಚ್ಚು ಪುಟಗಳ ಬೃಹತ್ ಗ್ರಂಥ ರಚಿಸಲಾಗಿದೆ. ಎಲ್ಲವನ್ನೂ ಒಳಗೊಂಡ ಅಧ್ಯಯನ ಯೋಗ್ಯ ಕೃತಿ ಇದಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸ್ಮರಣ ಸಂಚಿಕೆ ಸಂಪಾದಕ ವೀರಭದ್ರ ಸಿಂಪಿ ಮಾತನಾಡಿ, ಕಲ್ಯಾಣ ಕರ್ನಾಟಕ ಹಾಗೂ ಇತರ ಭಾಗದ ಲೇಖಕರಿಗೆ ಸೋಮವಾರದಿಂದ ಅಂಚೆ ಮೂಲಕ ಗ್ರಂಥ ಕಳಿಸಲಾಗುವುದು. ಜಿಲ್ಲೆಯ ಲೇಖಕರಿಗೆ ಮುಂದಿನ ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ವಿತರಿಸಲಾಗುವುದು ಎಂದು ತಿಳಿಸಿದರು.

ಸ್ಮರಣ ಸಂಚಿಕೆಗೆ ಲೇಖನ ಬರೆದುಕೊಟ್ಟಿರುವ ಎಲ್ಲ ಲೇಖಕರಿಗೆ ಗೌರವ ಧನ ನೀಡಲಾಗುವುದು. ಈ ಬಗ್ಗೆ ಜನವರಿಯಲ್ಲಿ ನಡೆದ ಸಭೆಯ ನಿರ್ಣಯ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಗೌರವ ಧನ ಕೊಡಿಸಲಾಗುವುದು. ಸಮಯದ ಅಭಾವ, ಕೆಲಸದ ಒತ್ತಡದಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಆಗಿಲ್ಲ. ಶೀಘ್ರವೇ ಭೇಟಿ ಮಾಡುವೆ ಎಂದು ಹೇಳಿದರು.

ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಅದ್ಬುತವಾಗಿ ಸ್ಮರಣ ಸಂಚಿಕೆಯನ್ನು ಸ್ವಲ್ಪ ಸಮಯದಲ್ಲಿಯೇ ರೂಪಿಸಲಾಗಿದೆ. ಬೇರೆಲ್ಲ ಸಮ್ಮೇಳನಕ್ಕಿಂತಲೂ ಕಲಬುರ್ಗಿ ಸಮ್ಮೇಳನ ಸ್ಮರಣ ಸಂಚಿಕೆ ದಾಖಲಾರ್ಹ ಗ್ರಂಥವಾಗಿದೆ. ಐಎಎಸ್ ಪರೀಕ್ಷೆ ಬರೆಯುವವರಿಗೂ ಸಹಕಾರಿಯಾಗುವಂತಿದೆ. 1550 ಗ್ರಂಥಗಳಿವೆ. ಅವನ್ನು ವಿತರಿಸುವ ಕೆಲಸ ಆರಂಭಗೊಂಡಿದೆ ಎಂದು ಸಿಂಪಿ ತಿಳಿಸಿದರು.

ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಸಂಚಾಲಕ ಡಾ.ವಿಜಯಕುಮಾರ ಪರುಪೆ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷರಾದ ದೌಲತರಾವ ಪಾಟೀಲ ವಂದನಾರ್ಪಣೆ ಸಲ್ಲಿಸಿದರು. ಡಾ.ಶರಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಸಂಪಾದಕೀಯ ಮಂಡಳಿಯ ಎಸ್.ಪಿ.ಸುಳ್ಳದ, ಚಂದ್ರಶೇಖರ ಕಟ್ಟಿ, ವಿಶ್ವನಾಥ ಭಕರೆ, ಶರಣಬಸಪ್ಪ ವಡ್ಡನಕೇರಿ, ಡಾ.ಭೀಮರಾವ ಅರಕೇರಿ, ವಿಜಯಕುಮಾರ ಪರೂತೆ, ಕಸಾಪ ಪ್ರಖರಾದ ಶಿವಾನಂದ ಕಶೆಟ್ಟೆ, ಸಿ.ಎಸ್.ಮಾಲಿಪಾಟೀಲ, ಚಂದ್ರಶೇಖರ ಪಾಟೀಲ, ಕಾಶೀನಾಥ ಗುತ್ತೇದಾರ, ಆನಂದ ನಂದೂರಕರ್, ವೀರಸಂಗಪ್ಪ ಸುಲೆಗಾಂವ, ಅರ್ಜುನ ಜಮಾದಾರ, ಡಿ.ಎಂ.ನದಾಫ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.