ADVERTISEMENT

ಕಲಬುರಗಿ: ‘ಜೋಳಿಗೆ’ಗೆ ಬಿದ್ದ 5 ಸಾವಿರ ಪುಸ್ತಕ

ಜಿಲ್ಲೆಯಲ್ಲಿ ಸದ್ದಿಲ್ಲದೇ ಸಾಗಿದೆ ಪುಸ್ತಕ ಸಂಗ್ರಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:30 IST
Last Updated 19 ನವೆಂಬರ್ 2025, 5:30 IST
ಕಲಬುರಗಿ ಜಿಲ್ಲೆಯ ಜೀವಣಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ‘‍ಪುಸ್ತಕ ಜೋಳಿಗೆ’ ಅಭಿಯಾನದ ನೋಟ
ಕಲಬುರಗಿ ಜಿಲ್ಲೆಯ ಜೀವಣಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ‘‍ಪುಸ್ತಕ ಜೋಳಿಗೆ’ ಅಭಿಯಾನದ ನೋಟ   

ಕಲಬುರಗಿ: ‘ಜೋಳಿಗೆಗೆ ಹಾಕಿ ಪುಸ್ತಕ, ಸೇರುವುದು ನಮ್ಮ ಮಸ್ತಕ’, ‘ಮನೆಯಿಂದ ಬರಲಿ ಜೋಳಿಗೆಗೊಂದು ಪುಸ್ತಕ’, ‘ಒಂದೊಂದು ಪುಸ್ತಕ ಕೊಟ್ರೆ, ತುಂಬುವುದು ನಮ್ಮ ಅರಳಿಕಟ್ಟೆ...’ ಎಂಬೆಲ್ಲ ಘೋಷಣೆಗಳೊಂದಿಗೆ ನಡೆಯುತ್ತಿರುವ ಪುಸ್ತಕ ಜೋಳಿಗೆ ಅಭಿಯಾನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಳೆದೆರಡು ತಿಂಗಳಲ್ಲಿ ಐದು ಸಾವಿರಕ್ಕೂ ಅಧಿಕ ಕೃತಿಗಳು ‘ಪುಸಕ್ತ ಜೋಳಿಗೆ’ಗೆ ಸಂದಿವೆ.

ಗ್ರಾಮೀಣ ಮಕ್ಕಳ ಓದು ಪ್ರೇರೇಪಿಸಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ನಾಗರಿಕರು ಮನೆಗಳಲ್ಲಿ ಬಳಸದ ಪುಸಕ್ತಗಳು, ಓದಿ ಮುಗಿಸಿದ ಕೃತಿಗಳನ್ನು ಈ ‘ಜೋಳಿಗೆ’ ತನ್ನತ್ತ ಸೆಳೆಯುತ್ತಿದೆ.

ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಮನೆ–ಮನೆಗೆ ತೆರಳಿ ‘ರಟ್ಟಿನ ಡಬ್ಬ’, ‘ಜೋಳಿಗೆ’ ಹಿಡಿದು ಪುಸಕ್ತಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರು ಹಾಕುವ ‘ಜ್ಞಾನದ ಹೊತ್ತಿಗೆ’ಗಳು ಪಂಚಾಯಿತಿ ವ್ಯಾಪ್ತಿಯ ‘ಅರಿವು ಕೇಂದ್ರ’ ಗ್ರಂಥಾಲಯಗಳನ್ನು ಅಲಂಕರಿಸುತ್ತಿವೆ. ‘ಪುಸ್ತಕ ಗೂಡು’ಗಳನ್ನು ಸೇರಿ, ಓದುವ ಮನಸುಗಳಿಗೆ ‘ಹೂರಣ’ ಒದಗಿಸುತ್ತಿವೆ.

ADVERTISEMENT

ಈ ಅಭಿಯಾನದಲ್ಲಿ ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ 5,097 ಪುಸ್ತಕಗಳು ‘ಜೋಳಿಗೆ’ಗೆ ದಕ್ಕಿವೆ. ಜೇವರ್ಗಿಯಲ್ಲಿ ಅತಿಹೆಚ್ಚು ಅಂದರೆ 1,015 ‘ಹೊತ್ತಿಗೆ’ಗಳನ್ನು ಸಾರ್ವಜನಿಕರು ಜೋಳಿಗೆಗೆ ಹಾಕಿದ್ದಾರೆ. ಕಾಳಗಿ ತಾಲ್ಲೂಕಿನಲ್ಲಿ ಕನಿಷ್ಠ ಅಂದರೆ 150 ಪುಸಕ್ತಗಳು ಜೋಳಿಗೆಗೆ ಬಿದ್ದಿವೆ.

ಇನ್ನುಳಿದಂತೆ ಆಳಂದದಲ್ಲಿ 695, ಅಫಜಲಪುರದಲ್ಲಿ 480, ಚಿಂಚೋಳಿಯಲ್ಲಿ 282, ಚಿತ್ತಾಪುರದಲ್ಲಿ 350, ಕಲಬುರಗಿಯಲ್ಲಿ 800, ಕಮಲಾಪುರದಲ್ಲಿ 400, ಸೇಡಂನಲ್ಲಿ 250, ಶಹಾಬಾದ್‌ನಲ್ಲಿ 205 ಹಾಗೂ ಯಡ್ರಾಮಿಯಲ್ಲಿ 350 ಪುಸ್ತಕಗಳನ್ನು ಸಾರ್ವಜನಿಕರು ಪುಸ್ತಕ ಜೋಳಿಗೆಗೆ ಹಾಕಿದ್ದಾರೆ.

‘ಇತ್ತೀಚೆಗೆ ಜೀವಣಗಿ ಗ್ರಾಮದಲ್ಲೂ ಪುಸ್ತಕ ಜೋಳಿಗೆ ಅಭಿಯಾನ ನಡೆಸಲಾಗಿದ್ದು, ಸಾಹಿತ್ಯ ಕೃತಿಗಳು, ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆಗಳು ಸೇರಿದಂತೆ ಸುಮಾರು 100 ಪುಸಕ್ತಗಳು ದೊರೆತಿವೆ. ಅವುಗಳನ್ನು ಅರಿವು ಕೇಂದ್ರದಲ್ಲಿ ಇರಿಸಿ, ಓದುಗರಿಗೆ ಅನುಕೂಲ ಕಲ್ಪಿಸಲಾಗಿದೆ’ ಎಂದು ಜೀವಣಗಿ ಪಿಡಿಒ ಮಹಾನಂದ ಪಾಟೀಲ ಹೇಳುತ್ತಾರೆ.

‘ಕಳೆದ ವರ್ಷ ಜೀವಣಗಿ ಪಂಚಾಯಿತಿ ವ್ಯಾಪ್ತಿಯ ಗೋಗಿ ಗ್ರಾಮದಲ್ಲಿ ಪುಸ್ತಕ ಜೋಳಿಗೆ ಕಾರ್ಯಕ್ರಮ ನಡೆಸಲಾಗಿತ್ತು. ಅಂದಾಜು 80 ಪುಸ್ತಕಗಳು ದೊರೆತಿದ್ದವು. ಕಲಬುರಗಿಯ ಕಾಲೇಜೊಂದು 200 ಪುಸ್ತಕಗಳನ್ನು ಪುಸ್ತಕ ಜೋಳಿಗೆಗೆ ಕೊಡುಗೆ ನೀಡಿತ್ತು. ಅವುಗಳನ್ನು ಬಳಸಿಕೊಂಡು ಗೋಗಿಯಲ್ಲಿ ‘ಪುಸಕ್ತ ಗೂಡು’ ಸ್ಥಾಪಿಸಲಾಗಿದ್ದು, ಅದರಿಂದ ಓದುಗರಿಗೆ ನೆರವಾಗಿದೆ’ ಎಂಬುದು ಅವರ ಅಭಿಮತ.

ಭಂವರ್ ಸಿಂಗ್ ಮೀನಾ

‘ಓದುಗರನ್ನು ತೊಡಗಿಸುವ ಉಪಕ್ರಮ’

‘ಗ್ರಾಮೀಣ ಜನರ ಜ್ಞಾನದ ಹರಿವು ಹೆಚ್ಚಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಜನರ ಭಾಗವಹಿಸುವಿಕೆ ಉತ್ತೇಜಿಸಲು ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪುಸ್ತಕ ಜೋಳಿಗೆ ಅಭಿಯಾನ ನಡೆಸಲಾಗುತ್ತಿದೆ. ನಾಗರಿಕರು ಈ ‘ಜೋಳಿಗೆ’ಗೆ ಮೌಲ್ಯಯುತ ಕೃತಿಗಳನ್ನು ಕೊಟ್ಟರೆ ಪರೋಕ್ಷವಾಗಿ ಅವರ ಸಹಭಾಗಿತ್ವ ಸಿಕ್ಕಂತಾಗುತ್ತದೆ. ಈ ಗ್ರಂಥಾಲಯ ತಮ್ಮದೆಂಬ ಭಾವನೆಯೂ ಬರುತ್ತದೆ. ಇದರಿಂದ ಗ್ರಂಥಾಲಯ ಬರೀ ಕಟ್ಟಡ ಎನಿಸದೇ ಸಾಮಾಜಿಕ ಸಂಸ್ಥೆಯಾಗಿ ರೂಪುಗೊಳ್ಳಲು ನೆರವಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.