ADVERTISEMENT

ಶೋಷಣೆ ಬರವಣಿಗೆಯ ಕೇಂದ್ರ ಬಿಂದು: ಡಾ. ಬಸವರಾಜ ಕಲ್ಗುಡಿ

ಶರಣ ಸಾಹಿತ್ಯ, ದಲಿತ ಸಾಹಿತ್ಯ ಸಂಪುಟ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 11:21 IST
Last Updated 26 ಸೆಪ್ಟೆಂಬರ್ 2018, 11:21 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು, ಕನ್ನಡ ದಲಿತ ಸಾಹಿತ್ಯ ಸಂಪುಟಗಳು ಹಾಗೂ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು, ಕನ್ನಡ ದಲಿತ ಸಾಹಿತ್ಯ ಸಂಪುಟಗಳು ಹಾಗೂ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು   

ಕಲಬುರ್ಗಿ: ‘ದಲಿತ ಬರಹಗಾರರು ಮತ್ತು ಚಿಂತಕರು ಶೋಷಣೆಯನ್ನು ತಮ್ಮ ಬರವಣಿಗೆಯ ಕೇಂದ್ರ ಬಿಂದುವನ್ನಾಗಿಸಿಕೊಂಡಿದ್ದಾರೆ’ ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಪ್ರಸಾರಾಂಗ, ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು, ಕನ್ನಡ ದಲಿತ ಸಾಹಿತ್ಯ ಸಂಪುಟಗಳು ಹಾಗೂ ಪಠ್ಯಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವ್ಯ ಸಾಹಿತ್ಯದಲ್ಲಿ ಶೂದ್ರ– ಬ್ರಾಹ್ಮಣ ಚರ್ಚೆ ಅಮೂರ್ತವಾಗಿತ್ತು. ಅದಕ್ಕೆ ದಲಿತ ಸಾಹಿತ್ಯವು ಮೂರ್ತ ರೂಪ ಕೊಟ್ಟಿತು. ದಲಿತ ಬರಹಗಾರರು ಶೋಚಣೆಯನ್ನು ಅನುಭವಿಸಿ ಬಂದಿದ್ದರಿಂದ ಮೂರ್ತ ರೂಪ ಕೊಡಲು ಸಾಧ್ಯವಾಯಿತು. ಸಿದ್ದಲಿಂಗಯ್ಯನವರು ಕಾವ್ಯದ ಮೂಲಕ, ದೇವನೂರ ಮಹಾದೇವ ಅವರು ಕಥನ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಬಂಡಾಯದ ಮೂಲಕ ಹೊಸ ಪರಿಕಲ್ಪನೆಯನ್ನೇ ಹುಟ್ಟು ಹಾಕಿದರು’ ಎಂದು ತಿಳಿಸಿದರು.

ADVERTISEMENT

‘ನವ್ಯ ಸಾಹಿತ್ಯದ ಸಂದರ್ಭದಲ್ಲಿ ಪ್ರಧಾನ ಸಂಸ್ಕೃತಿ ಮಾತ್ರ ಚರ್ಚೆಯಲ್ಲಿತ್ತು. ದಲಿತ ಸಾಹಿತ್ಯವು ಅಧೀನ ಸಂಸ್ಕೃತಿ ಅಥವಾ ಉಪ ಸಂಸ್ಕೃತಿಗಳೂ ಇವೆ ಎಂಬ ಚರ್ಚೆಯನ್ನು ಹುಟ್ಟು ಹಾಕಿತು. ಆ ಬಳಿಕ ಎಲ್ಲ ಬರಹಗಾರರು ಬೆಳಕಿಗೆ ಬರಲು ಸಾಧ್ಯವಾಯಿತು’ ಎಂದು ಹೇಳಿದರು.

‘ನವ್ಯ ಸಾಹಿತ್ಯವು ಪಟ್ಟಣ ಕೇಂದ್ರೀಕೃತವಾಗಿದ್ದು, ಹಳ್ಳಿಗಳು ಪ್ರಶಾಂತ ಸ್ಥಳಗಳು ಎಂದು ಬಿಂಬಿಸಿದೆ. ಆದರೆ, ಹಳ್ಳಿಯಿಂದ ಬಂದವರು, ಶೋಷಣೆ ಅನುಭವಿಸಿದವರು ಹಳ್ಳಿಗಳಲ್ಲಿ ಕ್ರೌರ್ಯ, ಅಶಾಂತಿ ಇದೆ ಎಂಬುದನ್ನು ಸಮಾಜಕ್ಕೆ ಪರಿಚಯಿಸಿದರು. ಆ ಮೂಲಕ ನವ್ಯ ಸಾಹಿತ್ಯಕ್ಕೆ ಮುಖಾಮುಖಿಯಾಗಿ ನಿಂತರು’ ಎಂದು ತಿಳಿಸಿದರು.

‘ಗುಲ್ಬರ್ಗ ವಿಶ್ವವಿದ್ಯಾಲಯ ಹೊರ ತಂದಿರುವ ಶರಣ ಸಂಪುಟಗಳು ಹೊಸ ಆಶಯಗಳನ್ನು ಒಳಗೊಂಡಿವೆ. ಹೈದರಾಬಾದ್ ಕರ್ನಾಟಕ ಭಾಗದ ಲೇಖಕರನ್ನು ಗುರುತಿಸಿ, ಅವರಿಂದಲೇ ಎಲ್ಲ ಕೃತಿಗಳನ್ನು ಬರೆಸಿರುವುದು ಉತ್ತಮ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಚಂದ್ರಶೇಖರ ನಿಟ್ಟೂರೆ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಡಾ. ಪಿ.ಎಸ್.ಕೊಕಟನೂರ, ಕುಲಸಚಿವರಾದ ಪ್ರೊ.ಸಿ.ಸೋಮಶೇಖರ, ಪ್ರೊ.ಡಿ.ಎಂ.ಮದರಿ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಬಸವರಾಜ ಕೋನೆಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.