ADVERTISEMENT

ಕಲಬುರ್ಗಿ: ಪುಸ್ತಕೋದ್ಯಮಕ್ಕೂ ಕೊರೊನಾ ಸಂಕಷ್ಟ

ಪುಸ್ತಕ, ಸ್ಟೇಷನರಿ ಮಳಿಗೆಗಳಿಗೆ ಸಿಗದ ಅವಕಾಶ; ಸಂಬಳ, ಬಾಡಿಗೆ ಪಾವತಿಗೂ ಸಮಸ್ಯೆ

ಸಂತೋಷ ಈ.ಚಿನಗುಡಿ
Published 18 ಜೂನ್ 2021, 19:30 IST
Last Updated 18 ಜೂನ್ 2021, 19:30 IST
ಕಲಬುರ್ಗಿಯ ಎಸ್‌.ಎಸ್.ಭಾವಿಕಟ್ಟಿ ಬುಕ್‌ಸ್ಟಾಲ್‌ನಲ್ಲಿ ಪುಸ್ತಕಗಳನ್ನು ಹೊಂದಿಸಿ ಇಡುತ್ತಿರುವ ಸಿಬ್ಬಂದಿಪ್ರಜಾವಾಣಿ ಚಿತ್ರಗಳು: ಪ್ರಶಾಂತ್‌. ಎಚ್‌.ಜಿ
ಕಲಬುರ್ಗಿಯ ಎಸ್‌.ಎಸ್.ಭಾವಿಕಟ್ಟಿ ಬುಕ್‌ಸ್ಟಾಲ್‌ನಲ್ಲಿ ಪುಸ್ತಕಗಳನ್ನು ಹೊಂದಿಸಿ ಇಡುತ್ತಿರುವ ಸಿಬ್ಬಂದಿಪ್ರಜಾವಾಣಿ ಚಿತ್ರಗಳು: ಪ್ರಶಾಂತ್‌. ಎಚ್‌.ಜಿ   

ಕಲಬುರ್ಗಿ: ಸತತ ಎರಡನೇ ವರ್ಷವೂ ಲಾಕ್‌ಡೌನ್‌ ಕಾರಣದಿಂದ ಜಿಲ್ಲೆಯ ಪುಸ್ತಕೋದ್ಯಮಕ್ಕೂ ಭಾರಿ ಪೆಟ್ಟು ಬಿದ್ದಿದೆ. ಶಾಲೆ, ಕಾಲೇಜುಗಳು ಆರಂಭವಾಗುತ್ತಿದ್ದ ಜೂನ್‌ ತಿಂಗಳಲ್ಲಿ ಪುಸ್ತಕ ಅಂಗಡಿಗಳವರು ಲಕ್ಷಾಂತರ ರೂಪಾಯಿಯ ವ್ಯಾಪಾರ ನಡೆಸುತ್ತಿದ್ದರು. ಆದರೆ, ಕೊರೊನಾ ವೈರಾಣು ಪುಸ್ತಕಗಳು ಗೆದ್ದಲು ತಿನ್ನುವಂತೆ ಮಾಡಿದೆ.

‌‘ಮದ್ಯದಅಂಗಡಿಗೆ ಅವಕಾಶ ನೀಡಿದ್ದಾರೆ. ಆದರೆ, ಬದುಕು ಕಟ್ಟಿಕೊಡುವ ಪುಸ್ತಕ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಇದೆಂಥ ನಿರ್ಧಾರವೋ ತಿಳಿಯದು. ಮನೆಯಲ್ಲೇ ಕುಳಿತುಕೊಂಡಿರುವ ಜನರಿಗೆ ಓದುವುದಕ್ಕೆ ಪುಸ್ತಕಗಳು ಬೇಕಾಗಿವೆ. ಮಕ್ಕಳ ತರಗತಿಗಳು ಕೂಡ ಆನ್‌ಲೈನ್‌ನಲ್ಲಿ ಆರಂಭವಾಗಿವೆ. ಅವರಿಗೂ ಕಲಿಕಾ ಸಾಮಗ್ರಿಗಳು ಬೇಕು. ಸರ್ಕಾರಿ, ಖಾಸಗಿ ಕಚೇರಿಗಳು, ಬ್ಯಾಂಕ್‌, ಫೈನಾನ್ಸ್, ನೌಕರರು, ಕಂಪನಿಗಳು, ಆಸ್ಪತ್ರೆ, ಎಲ್ಲ ತರಹದ ಮಳಿಗೆಗಳಿಗೂ ನೋಟ್‌ಬುಕ್‌, ಪೆನ್‌, ಫೈಲ್‌ಗಳು ಬೇಕು. ಹೀಗಾಗಿ ಪುಸ್ತಕಗಳನ್ನೂ ಅವಶ್ಯಕ ವಸ್ತು ಎಂದು ಪರಿಗಣಿಸಬೇಕು’ ಎಂಬುದು ವ್ಯಾಪಾರಿಗಳ ಒತ್ತಾಯ.

‌ಈ ಬಗ್ಗೆ ಜಿಲ್ಲಾ ಸ್ಟೇಷನರಿ ಹಾಗೂ ಪುಸ್ತಕ ವ್ಯಾಪಾರಿಗಳ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ದಿನದಲ್ಲಿ ಕನಿಷ್ಠ ಸಮಯ ಅವಕಾಶ ನೀಡಿ ಎಂದು ಕೋರಿದ್ದಾರೆ.

‘ಮಾರುಕಟ್ಟೆಯಲ್ಲಿ ತೀವ್ರ ಜನಜಂಗುಳಿ ಇದ್ದರೂ ಅವಕಾಶ ನೀಡಿದ್ದೀರಿ. ಪುಸ್ತಕ ಮಳಿಗೆಗೆ ಬರುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅದರಲ್ಲೂ ಮಕ್ಕಳಿಗೆ ಈಗ ಕಲಿಕಾ ಸಾಮಗ್ರಿಯ ಅವಶ್ಯವಿದೆ’ ಎಂದೂ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 120 ಪುಸ್ತಕ ಹಾಗೂ ಸ್ಟೇಷನರಿ ಮಳಿಗೆಗಳು, 78 ಪುಸ್ತಕ ಮಳಿಗೆಗಳು ಇವೆ. ಪುಸ್ತಕ, ನೋಟ್‌ಬುಕ್‌, ಸ್ಕೂಲ್‌ಬ್ಯಾಗ್‌, ವಾಟರ್‌ ಬಾಟಲ್‌ ಸೇರಿ ಹಲವಾರು ವಸ್ತುಗಳನ್ನು ದೆಹಲಿ, ರಾಜಸ್ತಾನ್‌, ಮುಂಬೈ, ಹೈದರಾಬಾದ್‌, ಗದಗ, ಹುಬ್ಬಳ್ಳಿ, ಬೆಂಗಳೂರು, ದಾಂಡೇಲಿ ಕಡೆಗಳಿಂದ ಖರೀದಿಸಲಾಗುತ್ತದೆ. ಕಳೆದ ವರ್ಷ ಖರೀದಿಸಿದ ಬಿಲ್‌ಗಳನ್ನೇ ಇನ್ನೂ ನೀಡಿಲ್ಲ ಎನ್ನುವುದು ಕೆಲ ವರ್ತಕರ ಸಂಕಷ್ಟ.

ವ್ಯಾಪಾರಿಗಳ ಸಂಕಷ್ಟ ಏನು?

ಮಳಿಗೆ ಮುಚ್ಚುವ ಸ್ಥಿತಿ

ಮೇ, ಜೂನ್‌, ಜುಲೈ ತಿಂಗಳಲ್ಲೇ ಪುಸ್ತಕ– ಸ್ಟೇಷನರಿ ವಸ್ತುಗಳ ವ್ಯಾಪಾರ ಹೆಚ್ಚಾಗಿ ನಡೆಯಬೇಕು. ಆದರೆ, ಎಲ್ಲವೂ ನಿಂತುಹೋಗಿದೆ. ಬಹುಪಾಲು ಮಕ್ಕಳಿಗೆ ಈಗ ಸಾಮಾಜಿಕ ಜಾಲತಾಣ, ಯೂಟೂಬ್‌ನಂಥ ಮಾರ್ಗಗಳು ರೂಢಿಯಾಗಿದ್ದು, ಪುಸ್ತಕ ಖರೀದಿಸುವವರೇ ಇಲ್ಲ

‌–ಎನ್‌.ಎ.ಪಾಟೀಲ, ಅಧ್ಯಕ್ಷ, ಜಿಲ್ಲಾ ಸ್ಟೇಷನರಿ ಹಾಗೂ ಪುಸ್ತಕ ವ್ಯಾಪಾರಿಗಳ ಸಂಘ

ಹಾನಿ ಉಂಟಾಗಿದೆ

ನಮ್ಮದು ಸಂಪೂರ್ಣ ಸ್ಟೇಷನರಿ ಅಂಗಡಿ. ನೋಟ್‌ಬುಕ್‌, ಫೈಲ್‌, ಪೆನ್ನು, ಪೆನ್ಸಿಲ್, ಇಂಕ್, ಕಲರ್ಸ್‌, ಡ್ರಾಯಿಂಗ್‌ ಶೀಟ್‌ ಹೀಗೆ ಮುಂತಾದ ಸಾಮಗ್ರಿಗಳನ್ನು ಮಾರುತ್ತೇವೆ. ಎರಡು– ಮೂರು ತಿಂಗಳು ಬಾಗಿಲು ತೆರೆಯದೇ ಹಾಗೆ ಇಟ್ಟಿದ್ದಕ್ಕೆ ಬಹುಪಾಲು ವಸ್ತುಗಳು ಹಾಳಾಗಿ, ಆರ್ಥಿಕ ನಷ್ಟ ಉಂಟಾಗಿದೆ.

–ಭೀಮಾಶಂಕರ ಪಟ್ಟಣ, ಮಳಿಗೆ ಮಾಲೀಕರು

ಸಂಬಳ, ಬಾಡಿಗೆ ಕೊಡಲಾಗುತ್ತಿಲ್ಲ

ಕೆಲಸಗಾರರಿಗೆ ಕಳೆದ ವರ್ಷ ಲಾಕ್‌ಡೌನ್‌ ವೇಳೆ ಅರ್ಧ ಸಂಬಳ ನೀಡಿದ್ದೇವೆ. ಆದರೆ, ಈ ವರ್ಷ ಪುಸ್ತಕ ವ್ಯಾಪಾರಿಗಳೇ ಸಾಲ ಮಾಡುವ ಸ್ಥಿತಿ ಬಂದಿದ್ದು, ಸಂಬಳ ಕೊಡಲು ಹೇಗೆ ಸಾಧ್ಯ? ಬಾಡಿಗೆ, ವಿದ್ಯುತ್‌ ಬಿಲ್‌ ನೀಡಲಾಗದೇ ಹಲವರು ಅಂಗಡಿ ಮುಚ್ಚಿದ್ದಾರೆ. ದೊಡ್ಡ ವ್ಯಾಪಾರಿಗಳು ಹೇಗೋ ತಡೆದುಕೊಳ್ಳುತ್ತೇವೆ. ಜೀವನೋಪಾಯಕ್ಕೆ ಇದನ್ನೇ ನಂಬಿದವರು ಏನು ಮಾಡಬೇಕು?

–ಬಸವರಾಜ ಕೊನೇಕ್‌, ಸಿದ್ಧಲಿಂಗೇಶ್ವರ ಬುಕ್‌ ಡಿಪೊ ಮತ್ತು ಪ್ರಕಾಶನ

ಸ್ತಬ್ದಗೊಂಡ ಪ್ರಿಂಟಿಂಗ್‌ ಪ್ರೆಸ್‌

‘ಮೂರು ತಿಂಗಳಿಂದ ನಮ್ಮ ಪ್ರಿಂಟಿಂಗ್‌ ಪ್ರೆಸ್‌ ಸಂಪೂರ್ಣ ಸ್ತಬ್ದಗೊಂಡಿದೆ. ನಗರದಲ್ಲಿರುವ ಹಲವರ ಕತೆಯೂ ಹೀಗೇ ಇದೆ. ಮದುವೆ, ಜಾತ್ರೆಗಳು ಇಲ್ಲದ ಕಾರಣ ಲಗ್ನಪತ್ರಿಕೆ, ಆಹ್ವಾನ ಪತ್ರಿಕೆ, ಪೋಸ್ಟರ್‌ ಪ್ರಿಂಟ್‌ ಬಂದಿಲ್ಲ. ಎರಡು ವರ್ಷಗಳ ಹಿಂದೆ ಮದುವೆ ಸೀಜನ್‌ನಲ್ಲಿ ಪ್ರತಿ ದಿನ 20 ಸಾವಿರ ಲಗ್ನಪತ್ರಿಕೆ ಪ್ರಿಂಟ್‌ ಮಾಡುತ್ತಿದ್ದೆವು. ಈಗ ಕೇವಲ 25 ಕಾರ್ಡ್‌ ಕೇಳುತ್ತಿದ್ದಾರೆ’ ಎನ್ನುವುದು ಪ್ರಿಂಟಿಂಗ್‌ ಪ್ರೆಸ್‌ ಮಾಲೀಕ ಮೋಹನರಾವ್‌ ದೇಶಪಾಂಡೆ ಅವರ ಗೋಳು.

‘ಕಂಪ್ಯೂಟರ್‌ ಕೆಲಸಗಾರ, ಪ್ರಿಂಟಿಂಗ್‌, ಬೈಂಡಿಂಗ್‌, ಲ್ಯಾಮಿನೇಷನ್‌, ಸೇಲಿಂಗ್‌ ಹೀಗೆ ಹಲವು ಕೆಲಸಗಾರರ ಜೀವನವೂ ಈಗ ದುಸ್ತರವಾಗಿದೆ.ಜಿಲ್ಲಾಡಳಿತಕ್ಕೆ ನಮ್ಮ ಸಮಸ್ಯೆಗಳು ಕಾಣಿಸುತ್ತಲೇ ಇಲ್ಲ. ಕನಿಷ್ಠ ಪರಿಹಾರವಾದರೂ ನೀಡಿದರೆ ಕೆಲಸಗಾರರ ಬದುಕುತ್ತಾರೆ’ ಎನ್ನುತ್ತಾರೆ ಅವರು.

₹ 100 ಕೋಟಿ ವ್ಯವಹಾರ ನಡೆಯುತ್ತಿತ್ತು

‘ಜಿಲ್ಲೆಯಲ್ಲಿ 2019ರಲ್ಲಿ ಜೂನ್‌ ತಿಂಗಳಲ್ಲೇ ಅಂದಾಜು ₹ 100 ಕೋಟಿ ಮೊತ್ತದ ವ್ಯವಹಾರ ನಡೆದಿತ್ತು. ಪ್ರತಿಯೊಂದು ಶಾಲೆ, ಕಾಲೇಜುಗಳೂ ವೈವಿಧ್ಯಮಯ ಕಲಿಕಾ ಸಾಮಗ್ರಿಗಳನ್ನು ‘ಬುಕ್‌ ಮಾಡಿದ್ದವು’. ಕೆಲವು ದೊಡ್ಡ ಶಾಲೆಗಳು ₹ 50 ಲಕ್ಷದಷ್ಟು ವ್ಯವಹಾರ ಮಾಡಿವೆ. ಆದರೆ, ಎರಡು ವರ್ಷಗಳಿಂದ ಅದೆಲ್ಲವೂ ನಿಂತಿದೆ. ಈಗ ಹಲವು ಶಿಕ್ಷಣ ಸಂಸ್ಥೆಗಳು ದೊಡ್ಡ ದೊಡ್ಡ ಪ್ರಿಂಟರ್ಸ್‌ ಜತೆಗೆ ಒಡಂಬಡಿಕೆ ಮಾಡಿಕೊಂಡು ಕಂಪನಿಗಳಿಂದ ನೇರವಾಗಿ ಖರೀದಿಸುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಹಲವರು ಆನ್‌ಲೈನ್‌ನಲ್ಲಿ ಖರೀದಿಸುತ್ತಿದ್ದಾರೆ, ಹೀಗಾಗಿ, ಪುಸ್ತಕ ವ್ಯಾಪಾರ ಪೂರ್ಣ ನೆಲ ಕಚ್ಚಿದೆ’ ಎನ್ನುವುದು ಬಸವರಾಜ ಕೊನೇಕ್‌ ಅವರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.