ADVERTISEMENT

ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯ: ಯಶವಂತ ಗುರುಕರ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 16:22 IST
Last Updated 6 ಡಿಸೆಂಬರ್ 2022, 16:22 IST
ಕಲಬುರಗಿಯಲ್ಲಿ ಮಂಗಳವಾರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್‌ ಅಂಬೇಡ್ಕರ್ ಅವರ ಪ್ರತಿಮೆಗೆ ಜಿ.ಪಂ ಸಿಇಒ ಗಿರೀಶ್‌ ಬದೋಲೆ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸ್‌ಪಿ ಇಶಾ ಪಂತ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್,  ಬೌದ್ಧ ಬಿಕ್ಕು ಸಂಘಾನಂದ ಭಂತೇಜಿ, ಡಿಎಚ್‌ಒ ಡಾ.ರಾಜಶೇಖರ್ ಮಾಲಿ ಮಾಲಾರ್ಪಣೆ ಮಾಡಿದರು
ಕಲಬುರಗಿಯಲ್ಲಿ ಮಂಗಳವಾರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್‌ ಅಂಬೇಡ್ಕರ್ ಅವರ ಪ್ರತಿಮೆಗೆ ಜಿ.ಪಂ ಸಿಇಒ ಗಿರೀಶ್‌ ಬದೋಲೆ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸ್‌ಪಿ ಇಶಾ ಪಂತ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್,  ಬೌದ್ಧ ಬಿಕ್ಕು ಸಂಘಾನಂದ ಭಂತೇಜಿ, ಡಿಎಚ್‌ಒ ಡಾ.ರಾಜಶೇಖರ್ ಮಾಲಿ ಮಾಲಾರ್ಪಣೆ ಮಾಡಿದರು   

ಕಲಬುರಗಿ: ‘ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯವಾಗಿದ್ದು, ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅಂಬೇಡ್ಕರರ ಆದರ್ಶ ಮತ್ತು ತತ್ವಗಳನ್ನು ಬಿತ್ತಬೇಕಿದೆ’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದರು.

ಇಲ್ಲಿನ ಜಗತ್ ವೃತ್ತದಲ್ಲಿ ಮಂಗಳವಾರ ಮಹಾಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿರಾಜ್ಯ ಸರ್ಕಾರಿ, ಅರೆ ಸರ್ಕಾರಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ನೌಕರರ ಸಂಘ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳಿಗೆ ಅಂಬೇಡ್ಕರ್ ಅವರು ನಡೆದುಬಂದ ಜೀವನ ಮತ್ತು ಸಾಧನೆಯ ಕುರಿತು ತಿಳಿಸಬೇಕು. ವಿದ್ಯಾರ್ಥಿಗಳು ಸಹ ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡಬೇಕು. ಅವರಲ್ಲಿನ ಆದರ್ಶ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಇದಕ್ಕೂ ಮುನ್ನ ಸಿದ್ದಾರ್ಥ ವಿಹಾರ ಟ್ರಸ್ಟ್‌ ಬೌದ್ಧ ಬಿಕ್ಕು ಸಂಘಾನಂದ ಭಂತೇಜಿ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಬುದ್ಧ ವಂದನೆ ಸಲ್ಲಿಸಲಾಯಿತು. ಡಿಸಿ ಯಶವಂತ ವಿ.ಗುರುಕರ್ ಅವರು ಪಂಚಶೀಲ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ನೀಲಿ ಧ್ವಜಾರೋಹಣ ನೆರವೇರಿಸಿದರು. ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ ಸೇರಿದಂತೆ ಇತರರು ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಡಾ. ಸುರೇಶ ಶರ್ಮಾ, ಸರ್ಕಾರಿ ಮಹಾವಿದ್ಯಾಲಯ ಪ್ರಾಂಶುಪಾಲ ವಿಜಯಕುಮಾರ ಸಾಲಿಮನಿ, ಡಿಎಚ್ಒ ಡಾ. ರಾಜಶೇಖರ ಮಾಲಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಎಸ್. ಮದನಕರ್, ಪ್ರಧಾನ ಕಾರ್ಯದರ್ಶಿ ಬಾಬು ಎ.ಮೌರ್ಯ, ಜಂಟಿ ಕಾರ್ಯದರ್ಶಿ ವಿಜಯಕುಮಾರ ನಾಗೂರ, ಖಜಾಂಚಿ ವಿಠ್ಠಲ ಗೋಳಾ, ಸಂಜಯ ಕುಮಾರ ಸೇರಿದಂತೆ ವಿವಿಧ ಸಮಾಜದ ಮುಖಂಡರು, ನೌಕರರು, ಸಂಘಟನೆಗಳ ಪದಾಧಿಕಾರಿಗಳು ಗೌರವ ಅರ್ಪಿಸಿದರು.

ಸಂವಿಧಾನ ಶಿಲ್ಪಿಗೆ ಇಡೀ ದಿನ ಗೌರವ ಸಲ್ಲಿಕೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಜಗತ್ ವೃತ್ತದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂಘ–ಸಂಸ್ಥೆಗಳು, ಗಣ್ಯರು, ಅಂಬೇಡ್ಕರ್ ಅನುಯಾಯಿಗಳು, ಚಿಂತಕರು, ವಿದ್ಯಾರ್ಥಿಗಳು ಗೌರವ ನಮನ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಅಂಬೇಡ್ಕರ್ ಪ್ರತಿಮೆಯತ್ತ ಹರಿದು ಬಂದ ಸಾವಿರಾರು ಜನರು, ಪುಷ್ಪಗಳನ್ನು ಅರ್ಪಿಸಿ ಗೌರವ ವಂದನೆ ಸಲ್ಲಿಸಿದರು. ನಗರ ಸೇರಿಂದತೆ ಸುತ್ತಲಿನ ಗ್ರಾಮಗಳ ನಿವಾಸಿಗಳು ಕುಟುಂಬ ಸಮೇತರಾಗಿ ಬಂದು, ಹೂಗಳನ್ನು ಸಮರ್ಪಿಸಿದರು.

ಪ್ರತಿಮೆಯ ಬದಿಯಲ್ಲಿ ವೇದಿಕೆ ಹಾಕಿ, ಬುದ್ಧ ಮತ್ತು ಭೀಮ ಗೀತೆಗಳನ್ನು ಹಲವು ಗಾಯಕರು ಪ್ರಸ್ತುತ ಪಡಿಸಿದರು. ಅಂಬೇಡ್ಕರ್‌ಗೆ ಗೌರವ ಸಲ್ಲಿಸಿ, ಬುದ್ಧ, ಅಂಬೇಡ್ಕರ್ ಜೀವನ ಮತ್ತು ಬೋಧನೆಗಳ ಗಾಯನಕ್ಕೆ ಕಿವಿಯಾದರು.

ಪ್ರತಿಮೆ ಸಮೀಪದಲ್ಲಿ ಅಂಬೇಡ್ಕರ್, ಬುದ್ಧ, ಬಸವಣ್ಣನವರ ಭಾವಚಿತ್ರಗಳ, ಕೀ ಚೈನ್‌, ಕ್ಯಾಲೆಂಡರ್‌, ಕೈದಾರ, ಮಣಿಗಳ ಮಾರಾಟ ಇತ್ತು. ಅಂಬೇಡ್ಕರ್ ವಿಚಾರಧಾರೆಗಳ ನೂರಾರು ಪುಸ್ತಕಗಳು ಸಹ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.