ADVERTISEMENT

ರೈತರ ಹೋರಾಟ; 16ರಂದು ಬೆಂಗಳೂರಿನಲ್ಲಿ ಸಭೆ

ರೈತರು, ಕಾರ್ಮಿಕರು ಹಾಗೂ ದಲಿತರ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ; ಬಿ.ಆರ್.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 14:43 IST
Last Updated 13 ಜನವರಿ 2021, 14:43 IST
ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ   

ಕಲಬುರ್ಗಿ: ‘ಕೃಷಿಗೆ ಬಿಟ್ಟಕ್ಕು ತರಬಲ್ಲ ಮೂರು ಪ್ರಮುಖ ಕಾಯ್ದೆಗಳ ತಿದ್ದಿಪಡಿ ವಿರೋಧಿಸಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಲು ರೈತರು, ಕಾರ್ಮಿಕರು ಹಾಗೂ ದಲಿತರ ಐಕ್ಯ ಹೋರಾಟ ಸಮಿತಿ ವತಿಯಿಂದ ಜ. 16ರಂದು ಬೆಂಗಳೂರಿನಲ್ಲಿ ಬೃಹತ್‌ ಸಭೆ ಕರೆಯಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಆರ್.ಪಾಟೀಲ ಹೇಳಿದರು.

‘ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲೂ ರೈತರ ಹೋರಾಟ ತೀವ್ರಗೊಂಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದನ್ನು ತೀವ್ರಗೊಳಿಸುವ ಮತ್ತು ನೈಜ ಚಿತ್ರಣವನ್ನು ರೈತರಿಗೆ ತಿಳಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದ’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್, ಮುಖಂಡರಾದ ಯದುವೀರ್ ಸಿಂಗ್, ಮನಜಿತ್ ಸಿಂಗ್, ಜಯಕರಣ್, ಕೆ.ವಿ.ಭಟ್, ಬಿ.ವಿ.ಬಿಜು, ಎಸ್.ಆರ್.ಹಿರೇಮಠ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ರೈತರಿಗೆ ಮಾರಕಾಗಿರುವ ಕಾಯ್ದೆಗಳನ್ನು ವಿರೋಧಿಸಿ 150ಕ್ಕೂ ಅಧಿಕ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಿವೆ. ಕರ್ನಾಟಕದಿಂದ ನಾನೂ ಸೇರಿ ಹಲವು ಮುಖಂಡರು ನಾಲ್ಕು ದಿನಗಳ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಕೇವಲ ಪಂಜಾಬ್ ರೈತರು ಹೋರಾಟದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.

‘ಕಾಯ್ದೆ ತಿದ್ದುಪಡಿಗಳಿಗೆ ಸುಪ್ರೀಂಕೋಟ್ ತಡೆ ನೀಡಿ, ಸಮಾಲೋಚನೆಗೆ ನಾಲ್ವರ ಸಮಿತಿ ರಚಿಸಿದೆ. ಆದರೆ, ಸಮಿತಿಗೆ ನೇಮಕವಾದ ನಾಲ್ವರು ಕಾಯ್ದೆಗಳ ಪರವಾಗಿಯೇ ಇದ್ದಾರೆ. ಹೀಗಾಗಿ ಕಾಯ್ದೆಗಳ ಬಗ್ಗೆ ಸಂಸತ್ತು ನಿರ್ಧರಿಸಬೇಕಾಗುತ್ತದೆ. ಬಜೆಟ್ ಅಧಿವೇಶನದವರೆಗೂ ಈ ಹೋರಾಟ ಮುಂದುವರೆಯಲಿದೆ. ಜ. 26ರಂದು ಹೋರಾಟದ ಭಾಗವಾಗಿ ಬೆಂಗಳೂರಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯಲಿದೆ’ ಎಂದರು.

ಶಾಸಕರಿಗೆ ಜ್ಞಾನವಿಲ್ಲ: ‘ಕೃಷಿ ಕಾಯ್ದೆಗಳ ವಿಚಾರದಲ್ಲಿ ನನ್ನದು ಕ್ಷುಲ್ಲಕ ರಾಜಕೀಯ ಎಂದು ಶಾಸಕ ಸುಭಾಷ ಗುತ್ತೇದಾರ ಟೀಕೆ ಮಾಡಿದ್ದಾರೆ. ಆದರೆ, ನನ್ನದು ಜನಪರವಾದ ರಾಜಕೀಯ. ನನ್ನ ಹೇಳಿಕೆ ಮತ್ತು ಹೋರಾಟಗಳಿಗೆ ನೀಡುತ್ತಿರುವ ಪ್ರತಿಕ್ರಿಯೆಗಳು ಶಾಸಕರ ಸ್ವಂತದ್ದಲ್ಲ; ಸಂಘ ಪರಿವಾರದವರು ಇದನ್ನು ಬರೆದುಕೊಡುತ್ತಿದ್ದಾರೆ. ಶಾಸಕರಿಗೆ ಕಾಯ್ದೆಗಳ ಬಗ್ಗೆ ಗಂಧ– ಗಾಳಿಯೂ ಗೊತ್ತಿಲ್ಲ. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅವರದೇ ಸರ್ಕಾರ ಮುಂಡಿಸಿರುವ ಕಾಯ್ದೆಗಳ ಹೆಸರು ಹೇಳುವಷ್ಟೂ ಜ್ಞಾನ ಶಾಸಕರಿಗೆ ಇಲ್ಲ’ ಎಂದು ಲೇವಡಿ ಮಾಡಿದರು.

ಮುಖಂಡರಾದ ಎಸ್.ಎಂ.ಶರ್ಮಾ, ಹನುಮಂತ ಎಸ್.ಎಚ್., ಬಸವರಾಜ, ಅರ್ಜುನ ಭದ್ರೆ, ವಿ.ಜಿ.ದೇಸಾಯಿ, ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.