ಕಲಬುರಗಿ: ‘ಕಬ್ಬು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮೆ) ಯೋಜನೆ ವ್ಯಾಪ್ತಿಗೆ ಒಳಪಡಿಸುವುದರ ಜತೆಗೆ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಬೇಕು’ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್. ಪಾಟೀಲ ಹೇಳಿದರು.
‘ಬೆಲೆಯ ಅಸ್ಥಿರತೆ, ರೈತರ ಖಾತೆಗೆ ವಿಳಂಬವಾಗಿ ಕಬ್ಬಿನ ಹಣ ಜಮೆ, ಬೆಳೆ ನಾಶ, ತೂಕದ ಯಂತ್ರದಲ್ಲಿ ಮೋಸ, ಅವೈಜ್ಞಾನಿಕ ಎಫ್‌ಆರ್‌ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ) ನಿಗದಿಯಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜ್ವಲಂತ ಸಮಸ್ಯೆಗಳ ಸುಳಿಯಲ್ಲಿರುವ ಬೆಳೆಗಾರರನ್ನು ಹೊರ ತರಲು, ರೈತರಲ್ಲಿ ಆರ್ಥಿಕ ಸ್ಥಿರತೆ ತರಲು ಸರ್ಕಾರಗಳು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಕೇಂದ್ರ ಸರ್ಕಾರವು ಹಿಂದಿನ ವರ್ಷದ ರಿಕವರಿ ಆಧಾರದ ಮೇಲೆ ಎಫ್‌ಆರ್‌ಪಿ ನಿಗದಿ ಮಾಡುತ್ತಿದೆ. ಇದು ಅವೈಜ್ಞಾನಿಕ. ಕಟಾವಿನ ವರ್ಷದ ರಿಕವರಿ ಮೇಲೆಯೇ ಎಫ್‌ಆರ್‌ಪಿ ನಿಗದಿ ಮಾಡಬೇಕು. ಕಬ್ಬಿನ ತೂಕದಲ್ಲಿ ಕಾರ್ಖಾನೆಗಳು ಬೆಳಗಾರರಿಗೆ ಮೋಸ ಮಾಡುತ್ತಿವೆ. ಸರ್ಕಾರದ ವತಿಯಿಂದ ಪ್ರತಿಯೊಂದು ಕಾರ್ಖಾನೆಗಳ ಮುಂದೆ ತೂಕದ ಯಂತ್ರಗಳನ್ನು ಅಳವಡಿಸಬೇಕು’ ಎಂದರು.
‘ಸಿ. ರಂಗನಾಥ್ ಸಮಿತಿ ವರದಿ ಪ್ರಕಾರ, ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭದಲ್ಲಿ ಶೇ 70ರಷ್ಟು ಬೆಳೆಗಾರರಿಗೆ ಹಾಗೂ ಶೇ 30ರಷ್ಟು ಕಾರ್ಖಾನೆಗಳಿಗೆ ಹಂಚಿಕೆ ಆಗಬೇಕು. ಆದರೆ, ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರಗಳು ವಿಫಲವಾಗಿವೆ. ಇದನ್ನೂ ಕೂಡಲೇ ಜಾರಿಗೆ ತಂದು ಬೆಳೆಗಾರರ ಹಿತ ಕಾಯಬೇಕು’ ಎಂದು ಕೋರಿದರು.
‘ಎಫ್‌ಆರ್‌ಪಿ ಕಾನೂನು ಅನ್ವಯ, ಕಬ್ಬು ಸರಬರಾಜು ಮಾಡಿದ 14 ದಿನಗಳಲ್ಲಿ ಕಾರ್ಖಾನೆಗಳು ಬೆಳೆಗಾರರ ಖಾತೆಗೆ ಹಣವನ್ನು ಜಮೆ ಮಾಡಬೇಕು. ವಿಳಂಬವಾದರೆ ಶೇ 15ರಷ್ಟು ಬಡ್ಡಿ ಕೊಡಬೇಕು ಎಂಬ ನಿಯಮವಿದೆ. ಬೆಳೆಗಾರರು ಕೋರ್ಟ್ ಮೊರೆ ಹೋಗಿ ಹಣ ಪಡೆಯುವುದು ಕಷ್ಟಕರ ಸಂಗತಿ. ಇದನ್ನು ಅರಿತ ಕಾರ್ಖಾನೆಗಳ ಮಾಲೀಕರು ಈ ನಿಯಮವನ್ನು ದುರ್ಬಳಕೆ ಮಾಡಿಕೊಂಡು, ಹಣ ಕೊಡದೆ ಸತಾಯಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಗುಜರಾತ್‌ನ ಘನದೇವಿ ಸಹಕಾರಿ ಸಕ್ಕರೆ ಕಾರ್ಖಾನೆಯು ಕಟಾವು ಮತ್ತು ಸಾಗಾಣಿಕೆ ವೆಚ್ಚ ತೆಗೆದು ಪ್ರತಿ ಟನ್ ಕಬ್ಬಿಗೆ ₹ 4 ಸಾವಿರ ನಿಗದಿ ಮಾಡಿದೆ. ಇಂತಹುದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ? ಈ ಬಗ್ಗೆ ಅಧ್ಯಯನಕ್ಕಾಗಿ ಸರ್ಕಾರವು ಕಬ್ಬು ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಿ, ಅವರನ್ನು ಗುಜರಾತ್‌ಗೆ ಕಳುಹಿಸಬೇಕು. ನಮ್ಮ ಬೆಳೆಗಾರರಿಗೂ ಉತ್ತಮ ಬೆಲೆ ಸಿಗುವಂತೆ ಆಗಬೇಕು’ ಎಂದರು.
‘ಸಕ್ಕರೆ ಸಚಿವರು ನವೆಂಬರ್ 1ರಿಂದ ಕಬ್ಬಿನ ಬೆಲೆ ನಿಗದಿ ಮಾಡಿ, ಕಾರ್ಯಾರಂಭ ಮಾಡಬೇಕು ಎಂದು ಆದೇಶಿಸಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಬೆಲೆ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುತ್ತಿದ್ದು, ಈ ಬಗ್ಗೆ ಕಾರ್ಖಾನೆಗಳ ಮಾಲೀಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೇಶ ಪಾಟೀಲ ರಾಜಪುರ್, ಪ್ರಧಾನ ಕಾರ್ಯದರ್ಶಿ ಧರ್ಮರಾಜ ಸಾಹು, ಉಪಾಧ್ಯಕ್ಷ ಶಾಂತವೀರಪ್ಪ, ಪ್ರಮುಖರಾದ ಶಾಂತವೀರಪ್ಪ ದಾಸ್ತಾಪುರ್, ನಾಗೇಂದ್ರ ರಾವ್ ದೇಶಮುಖ್, ಶರಣು ಬಿಲ್ಲಾಡ್, ಕರಿಬಸಪ್ಪ ಉಜ್ಜ, ದೌಲತ್ ರಾಯ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.