ADVERTISEMENT

ಬ್ರಾಹ್ಮಣ ಸಮುದಾಯದ ಸಮಾಜದ ಸ್ಥಿತಿಗತಿ ಅರಿಯಲು ಸಮೀಕ್ಷೆ: ಸಚ್ಚಿದಾನಂದಮೂರ್ತಿ

ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 15:33 IST
Last Updated 24 ಜನವರಿ 2021, 15:33 IST
ಎಚ್.ಎಸ್.ಸಚ್ಚಿದಾನಂದಮೂರ್ತಿ
ಎಚ್.ಎಸ್.ಸಚ್ಚಿದಾನಂದಮೂರ್ತಿ   

ಕಲಬುರ್ಗಿ: ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿ–ಗತಿ ಅರಿಯಲು ಮತ್ತು ಸರ್ಕಾರಿ ಸೌಲಭ್ಯಗಳನ್ನು ಸಮುದಾಯದ ಎಲ್ಲ ಸ್ತರದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸಮೀಕ್ಷೆ ಆರಂಭಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಸುಮಾರು 42 ಲಕ್ಷ ಇದೆ. ಆದರೆ, ಹಲವರು ಬ್ರಾಹ್ಮಣ ಬದಲು ಕೇವಲ ತಮ್ಮ ಉಪ ಪಂಗಡವನ್ನಷ್ಟೇ ದಾಖಲೆಗಳಲ್ಲಿ ನಮೂದಿಸುತ್ತಿದ್ದಾರೆ. ಇದರಿಂದ ಸದ್ಯದ ಅಂಕಿ–ಅಂಶದ ಪ್ರಕಾರ 17 ಲಕ್ಷ ಜನಸಂಖ್ಯೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪ್ರತಿ ತಾಲ್ಲೂಕುವಾರು ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಈಗಾಗಲೇ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಸರ್ವೆ ನಡೆದಿದೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಸರ್ವೆ ಆರಂಭವಾಗಲಿದೆ. ಕುಟುಂಬದ ಸದಸ್ಯರ ವಿವರ, ವೃತ್ತಿ, ಆದಾಯ ಸೇರಿದಂತೆ ಸಮಗ್ರ ಬಗ್ಗೆ ಸಂಗ್ರಹಿಸಲಾಗುವುದು. ಈ ಮೂಲಕ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಸರ್ಕಾರಿ ಸವಲತ್ತುಗಳನ್ನು ಕಲ್ಪಿಸುವ ಪ್ರಯತ್ನ ಮಾಡಲಾಗುವುದು’ ಎಂದರು.

ADVERTISEMENT

ಮುಖ್ಯವಾಗಿ ಕೇಂದ್ರ ಸರ್ಕಾರ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ 10ರಷ್ಟು ಮೀಸಲಾತಿ ನಿಗದಿ ಪಡಿಸಿದ್ದು, ₹8 ಲಕ್ಷದವರಿಗೆ ಆದಾಯ ಹೊಂದಿದ ಬ್ರಾಹ್ಮಣರು ಆಯಾ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರಮಾಣಪತ್ರ ಪಡೆಯಬೇಕು. ಈ ಮೀಸಲಾತಿಯನ್ನು ರಾಜ್ಯ ಸರ್ಕಾರ ಸಹ
ಅನುಷ್ಠಾನ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಲಾಗಿದೆ. ನಮುಂದಿನ ಅಧಿವೇಶನದಲ್ಲಿ ಮೀಸಲಾತಿ ಮಸೂದೆ ಮಂಡನೆಯ ಭರವಸೆ ನೀಡಿದ್ದಾರೆ ಎಂದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಡಿ ಬೆಂಗಳೂರಿನಲ್ಲಿ ಬ್ರಾಹ್ಮಣರಿಗೆ ಒಂದು ಸಾವಿರ ನಿವೇಶನ ಹಂಚಲು ಬಿಡಿಎದಿಂದ ನಿವೇಶನ ದೊರೆತಿದೆ. ಪ್ರತಿ ಜಿಲ್ಲೆಯಲ್ಲಿ ತಲಾ ನೂರು ನಿವೇಶನ ಪಡೆದು, ಕಡುಬಡ ಬ್ರಾಹ್ಮಣರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಭಾನುಪ್ರಕಾಶ ಶರ್ಮಾ, ಜಗದೀಶ ಹುನಗುಂದ, ಸುಬ್ಬರಾಯ ಹೆಗಡೆ, ಕೆ.ಎಸ್. ಛಾಯಾಪತಿ, ವತ್ಸಲಾ ನಾಗೇಶ, ಜಗನ್ನಾಥ ಕುಲಕರ್ಣಿ, ಜಿಡಿಎ ಅಧ್ಯಕ್ಷ ದಯಾಘನ ಧಾರವಾಡಕರ್, ಅರುಣ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಇದ್ದರು.

ಮಂಡಳಿಯಿಂದ ಏಳು ಯೋಜನೆ ಜಾರಿ

ಬ್ರಾಹ್ಮಣ ಅಭಿವೃದ್ಧಿ ಮಂಡಳಿ 7 ಪ್ರಮುಖ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಶೀಘ್ರ ಇನ್ನು ಮೂರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಚ್ಚಿದಾನಂದಮೂರ್ತಿ ಹೇಳಿದರು.

ಸಾಂಧಿಪತಿ ಶಿಷ್ಯ ವೇತನ ಅಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಲಾಗುತ್ತದೆ. ಇದಕ್ಕಾಗಿ ₹ 14 ಕೋಟಿ ಮೀಸಲಿಡಲಾಗಿದ್ದು, ಈಗಾಗಲೇ 580 ಆನ್ ಲೈನ್ ಅರ್ಜಿಗಳು ಸಲ್ಲಿಕೆಯಾಗಿವೆ. ಪಿಯುಸಿ, ಐಟಿಐ ವಿದ್ಯಾರ್ಥಿಗಳಿಗೆ ತಲಾ ₹ 20 ಸಾವಿರ, ಪದವಿ ವಿದ್ಯಾರ್ಥಿಗಳಿಗೆ ₹ 25 ಸಾವಿರ, ವೃತ್ತಿಪರ ಕೋರ್ಸುಗಳಿಗೆ ₹ 50 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಸಚ್ಚಿದಾನಂದಮೂರ್ತಿ ಮಾಹಿತಿ ನೀಡಿದರು.

ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವು ನೀಡುವ ಸಲುವಾಗಿ ಪುರುಷೋತ್ತಮ ಯೋಜನೆ, ಕೃಷಿಕರಿಗೆ ಅನ್ನದಾತ ಯೋಜನೆ, ಮಹಿಳೆಯರ ಮದುವೆ ₹ 25 ಸಾವಿರ ನೆರವು ಕಲ್ಪಿಸುವ ಅರುಂಧತಿ ಯೋಜನೆ, ಆರ್ಚಕರು ಮತ್ತು ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಲ್ಲಿ ₹ 3 ಲಕ್ಷ ಬಾಂಡ್ ಇರುವ ಮೈತ್ರೇಯ ಯೋಜನೆ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಐಎಎಸ್ ಮತ್ತು ಐಪಿಎಸ್ ತರಬೇತಿಗೆ ಚಾಣಕ್ಯ ಆಡಳಿತ ತರಬೇತಿ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಮಾಧ್ಯಮ ಕ್ಷೇತ್ರದಲ್ಲಿ ವರ್ಷಕ್ಕೆ 10 ಬ್ರಾಹ್ಮಣ ಪತ್ರಕರ್ತರಿಗೆ ₹ 70 ಸಾವಿರ ಮೌಲ್ಯದ ಲ್ಯಾ‍ಪ್‌ಟಾಪ್ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.