ADVERTISEMENT

ಬ್ರೇಲ್‌ ಗ್ರಂಥಾಲಯ; ಅಂಧ ವಿದ್ಯಾರ್ಥಿಗಳ ಬೆಳಕಿಂಡಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 13:35 IST
Last Updated 18 ಜನವರಿ 2026, 13:35 IST
ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿರುವ ಇಂಡೆಕ್ಸ್ ಬ್ರೈಲ್ ಬೇಸಿಕ್ ಡಿ ವಿ5 ಪ್ರಿಂಟರ್
ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿರುವ ಇಂಡೆಕ್ಸ್ ಬ್ರೈಲ್ ಬೇಸಿಕ್ ಡಿ ವಿ5 ಪ್ರಿಂಟರ್   

ಜಗತ್ತನ್ನು ನೋಡುವ ಅವಕಾಶ ಕಳೆದುಕೊಂಡಿರುವ ಅಂಧ ವಿದ್ಯಾರ್ಥಿಗಳಿಗೆ ದೇಶದ ಯಾವುದೇ ಭಾಷೆಯಲ್ಲಿನ ಸಾಹಿತ್ಯ, ಲೇಖನ, ಪಾಠಗಳನ್ನು ಬ್ರೇಲ್‌ ಲಿಪಿಗೆ (ಅಂಧಲಿಪಿ) ಪರಿವರ್ತಿಸಿಕೊಡಬಲ್ಲ ‘ಬ್ರೇಲ್‌ ಗ್ರಂಥಾಲಯ’ವು ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇದೆ. ಈ ಮೂಲಕ, ಅಂಧ ವಿದ್ಯಾರ್ಥಿಗಳ ಪಾಲಿಗೆ ಇದು ಜಗದ ಬೆಳಕಿಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ರಾಜ್ಯದ ಯಾವುದೇ ಭಾಗದ ಅಂಧ ವಿದ್ಯಾರ್ಥಿಯಾದರೂ ತನಗೆ ಅಗತ್ಯವಾದ ಪುಸ್ತಕ ಅಥವಾ ಲೇಖನವನ್ನು ಈ ಗ್ರಂಥಾಲಯಕ್ಕೆ ಪಿಡಿಎಫ್‌ ರೂಪದಲ್ಲಿ ಕಳುಹಿಸಿಕೊಟ್ಟರೆ, ಅದನ್ನು ಕ್ಷಣಾರ್ಧದಲ್ಲಿ ಬ್ರೇಲ್‌ ಲಿಪಿಗೆ ಪರಿವರ್ತಿಸಿ ಕೊಡಬಲ್ಲ ವ್ಯವಸ್ಥೆ ಇಲ್ಲಿದೆ. ಇಂತಹ ಸೌಲಭ್ಯವುಳ್ಳ ಗ್ರಂಥಾಲಯವು ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಇಲ್ಲ. ಹೀಗಾಗಿ, ಬೇರೆ ಭಾಗಗಳಿಂದಲೂ ಅಂಧ ವಿದ್ಯಾರ್ಥಿಗಳು ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಈ ಗ್ರಂಥಾಲಯದ ನೆರವು ಪಡೆದುಕೊಳ್ಳುತ್ತಿದ್ದಾರೆ. 

ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುತ್ತಿದ್ದ ಅಂಧ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿದ್ಯಾರ್ಥಿಗಳಂತೆ ಮುದ್ರಿತ ಪುಸ್ತಕಗಳನ್ನು ಓದಲು ಆಗುತ್ತಿರಲಿಲ್ಲ. ಬ್ರೇಲ್‌ ಲಿಪಿಯಲ್ಲಿ ಇದ್ದರಷ್ಟೇ ಓದಲು ಅವರಿಗೆ ಸಾಧ್ಯವಾಗುತ್ತಿತ್ತು. ಈ ಸಮಸ್ಯೆಯನ್ನು ವಿಶ್ವವಿದ್ಯಾಲಯದ ಗ್ರಂಥಾಲಯಾಧಿಕಾರಿ ಪರಶುರಾಮ ಕಟ್ಟಿಮನಿ ಗಂಭೀರವಾಗಿ ಪರಿಗಣಿಸಿದರು. ಮುದ್ರಿತ ಬರಹಗಳನ್ನು ಬ್ರೇಲ್‌ ಲಿಪಿಗೆ ಪರಿವರ್ತಿಸುವ ಲೆಕ್ಸ್ ಏರ್ ಸಾಧನದ ಖರೀದಿ ಪ್ರಸ್ತಾವವನ್ನು 2018ರಲ್ಲಿ ಅಂದಿನ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯ ಅವರ ಮುಂದೆ ಇರಿಸಿದರು. ಅದರಂತೆ, ಅಂಧ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಸಾಧನ ಖರೀದಿಸಿ ಬ್ರೇಲ್‌ ಗ್ರಂಥಾಲಯ ಆರಂಭಿಸುವುದಕ್ಕೆ ಅಗತ್ಯವಾದ ₹ 9 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಯಿತು. ಅದನ್ನು ಬಳಸಿಕೊಂಡು ವಿಶ್ವವಿದ್ಯಾಲಯದ ಸುಸಜ್ಜಿತ ಗ್ರಂಥಾಲಯದಲ್ಲಿ ‘ಇಂಡಿಯನ್ ಬ್ರೇಲ್‌ ಟ್ರಾನ್ಸ್‌ಲೇಟರ್ ಸಾಫ್ಟ್‌ವೇರ್’ ಅಳವಡಿಸಲಾಗಿದೆ. 

ADVERTISEMENT

‘ಲೆಕ್ಸ್ ಏರ್ ಸಾಧನವು ಒಂದಿಡೀ ಪುಸ್ತಕವನ್ನು ಬೇಕಾದರೂ ಬ್ರೇಲ್‌ಗೆ ಪರಿವರ್ತಿಸುತ್ತದೆ ಅಥವಾ ಯಾವ ಪುಟದಿಂದ ಯಾವ ಪುಟದವರೆಗೆ ಬೇಕು ಎಂದು ಕಮಾಂಡ್‌ ಕೊಟ್ಟರೆ ಅಷ್ಟು ಪುಟಗಳನ್ನು ಮಾತ್ರ ಬ್ರೇಲ್‌ಗೆ ಪರಿವರ್ತಿಸುವ ವ್ಯವಸ್ಥೆಯೂ ಇದರಲ್ಲಿದೆ’ ಎನ್ನುತ್ತಾರೆ ಪರಶುರಾಮ ಕಟ್ಟಿಮನಿ.

ಈ ಗ್ರಂಥಾಲಯದಿಂದ ಇದುವರೆಗೆ 30ಕ್ಕೂ ಅಧಿಕ ಅಂಧ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಅವರಲ್ಲಿ ಕೆಲವರು ಇದೇ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಅಧ್ಯಯನ ಮುಂದುವರಿಸಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ತಮಗೆ ಬೇಕಾದ ಪಠ್ಯವನ್ನು ಗ್ರಂಥಾಲಯಕ್ಕೆ ಕಳುಹಿಸಿ ಬ್ರೇಲ್‌ನಲ್ಲಿ ತರಿಸಿಕೊಂಡಿದ್ದಾರೆ.

ಅಂಧ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಬ್ರೇಲ್‌ ಲಿಪಿ ಅತ್ಯಂತ ಅಗತ್ಯವಾದ ಊರುಗೋಲು. ಆದ್ದರಿಂದಲೇ ದೇಶದ ವಿವಿಧ ಭಾಷೆಗಳಲ್ಲಿನ ಪಠ್ಯ, ಲೇಖನಗಳನ್ನು ಬ್ರೇಲ್‌ಗೆ ಪರಿವರ್ತಿಸಿಕೊಡಲು ಕೇಂದ್ರೀಯ ವಿಶ್ವವಿದ್ಯಾಲಯವು ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ. ವಿದ್ಯಾರ್ಥಿಗಳಿಂದ ಶುಲ್ಕ ಪಡೆಯದಂತೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಗ್ರಂಥಾಲಯ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಉಪಕರಣ ಖರೀದಿಗೆ ಪ್ರಸ್ತಾವ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಬ್ರೇಲ್‌ ಗ್ರಂಥಾಲಯದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಲು ಅನುವಾಗುವಂತೆ, ಬ್ರೇಲ್‌ ಲಿಪಿಯನ್ನು ಹೊಂದಿದ ಟ್ಯಾಬ್‌ಗಳನ್ನು ಖರೀದಿಸಲು ಚಿಂತನೆ ನಡೆಸಿದೆ. ಅಲ್ಲದೆ, ಕೈಯಲ್ಲಿ ಉಂಗುರದಂತಹ ಸಾಧನ ಹಾಕಿಕೊಂಡು ಅಥವಾ ಕಿವಿಗೆ ಇಯರ್ ಫೋನ್ ಧರಿಸಿ ತಮಗೆ ಬೇಕೆಂದಾಗ ಬ್ರೇಲ್‌ ಲಿಪಿಯಲ್ಲಿನ ಅಕ್ಷರಗಳನ್ನು ಓದಲು ಸಾಧ್ಯವಾಗುವಂತಹ ಸಾಧನಗಳನ್ನು ಖರೀದಿಸಿ ಅಂಧ ವಿದ್ಯಾರ್ಥಿಗಳಿಗೆ ಎರವಲು ನೀಡಲು ಉದ್ದೇಶಿಸಿದೆ.

ಇದಕ್ಕೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು ₹ 35 ಲಕ್ಷ ಆರ್ಥಿಕ ನೆರವು ನೀಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ವಿಶ್ವವಿದ್ಯಾಲಯದ ಗ್ರಂಥಾಲಯಾಧಿಕಾರಿ ಪರಶುರಾಮ ಕಟ್ಟಿಮನಿ ತಿಳಿಸಿದ್ದಾರೆ.

ಹೀಗೆ ಖರೀದಿಸಿದ ಟ್ಯಾಬ್‌ಗಳನ್ನು ಅಂಧ ವಿದ್ಯಾರ್ಥಿಗಳು ಕೋರ್ಸ್ ಮುಗಿಯುವವರೆಗೂ ತಮ್ಮಲ್ಲಿಯೇ ಇರಿಸಿಕೊಳ್ಳಲು ಅವಕಾಶ ನೀಡಲಾಗುವುದು. ಕೋರ್ಸ್ ಮುಗಿದ ಬಳಿಕ ಮರಳಿ ಪಡೆದು ಮತ್ತೊಬ್ಬರಿಗೆ ಹಂಚಿಕೆ ಮಾಡುವ ಚಿಂತನೆ ಇದೆ.

ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿರುವ ಲೆಕ್ಸ್ ಏರ್ ಸ್ಕ್ಯಾನರ್ ಸಾಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.