ADVERTISEMENT

ಲಂಚ ಪಡೆಯುತ್ತಿದ್ದ ಎಂಜಿನಿಯರ್‌, ಸಿಬ್ಬಂದಿ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 1:46 IST
Last Updated 2 ಅಕ್ಟೋಬರ್ 2021, 1:46 IST

ಕಲಬುರ್ಗಿ: ಲೋಕೋಪಯೋಗಿ ಇಲಾಖೆಯ ಆಳಂದ ಕಚೇರಿಯಲ್ಲಿ ಶುಕ್ರವಾರ, ಕಲ್ಲು ಕ್ವಾರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ₹ 10 ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಹಾಗೂ ಸಿಬ್ಬಂದಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೀಸಿದ ಬಲೆಗೆ ಎಂಜಿನಿಯರ್‌ ಗುರುರಾಜ್‌ ಕಳಸ್ಕರ್‌ ಹಾಗೂ ಕಚೇರಿಯ ಸಿಬ್ಬಂದಿ ವಿಜಯಕುಮಾರ್‌ ಚಿಟಗುಪ್ಪಕರ್‌ ಸಿಕ್ಕಿಬಿದಿದ್ದಾರೆ ಎಂದು ಎಸಿಬಿ ಎಸ್ಪಿ ಮೇಘಣ್ಣವರ ತಿಳಿಸಿದ್ದಾರೆ.

ಆಳಂದದ ಮೆಹಬೂಬ್‌ ಸಾಬ್‌ ಎನ್ನುವವರು ಕಲ್ಲು ಕ್ವಾರಿಯಲ್ಲಿ ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸಿದ್ದರು. ಅವರಿಗೆ ಅನುಮತಿ ಸಿಕ್ಕ ಕ್ವಾರಿಗೆ ನಿರಾಕ್ಷೇಪಣಾ ಪತ್ರಕ್ಕಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕಚೇರಿಗೆ ಪದೇಪದೇ ಅಲೆಯುತ್ತಿದ್ದರು. ಹಣ ನೀಡಿದರೆ ಮಾತ್ರ ಪ್ರಮಾಣ ಪತ್ರ ನೀಡುವುದಾಗಿ ಎಂಜಿನಿಯರ್‌ ಗುರುರಾಜ್‌ ₹ 10 ಸಾವಿರ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಎಸಿಬಿಗೆ ದೂರು ನೀಡಿದ್ದರು.

ADVERTISEMENT

ಶುಕ್ರವಾರ ಮಧ್ಯಾಹ್ನ ಮೆಹಬೂಬ್‌ಸಾಬ್‌ ಅವರು ಗುರುರಾಜ್‌ ಹಾಗೂ ವಿಜಯಕುಮಾರ ಅವರನ್ನು ಸಂಪರ್ಕಿಸಿ ಹಣ ನೀಡಲು ಬಂದರು. ಇಬ್ಬರೂ ಹಣ ಎಣಿಸಿಕೊಳ್ಳುವ ಹೊತ್ತಿಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದರು ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.