ಚಿಂಚೋಳಿ: ಮತಕ್ಷೇತ್ರ ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ಜನರ ಸಹಕಾರ, ಜನಪ್ರತಿನಿಧಿಗಳ ನಿರಂತರ ಪ್ರಯತ್ನ ಮತ್ತು ಅಧಿಕಾರಿಗಳ ಶ್ರಮದಿಂದ ಮಾತ್ರ ಸಾಧ್ಯ ಎಂದು ಶಾಸಕ ಡಾ. ಅವಿನಾಶ ಉಮೇಶ ಜಾಧವ ಇಂದಿಲ್ಲಿ ತಿಳಿಸಿದರು.
ತಾಲ್ಲೂಕಿನ ಕನಕಪುರ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಕನಕಪುರ ಗಾರಂಪಳ್ಳಿ ರಸ್ತೆಗೆ ನಿರ್ಮಿಸುವ ಅಂದಾಜು ₹5 ಕೋಟಿ ಮೊತ್ತದ ಬ್ರಿಜ್ ಕಂ ಬ್ಯಾರೇಜು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು.
ಕೆಕೆಡಿಬಿಯ ಮ್ಯಾಕ್ರೊ ಯೋಜನೆ ಅಡಿಯಲ್ಲಿ ₹5 ಕೋಟಿ ಮಂಜೂರು ಮಾಡಿಸಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ 150 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯದ ಜತೆಗೆ ಗಾರಂಪಳ್ಳಿ ಕನಕಪುರ ಮಧ್ಯೆ ಸಂಪರ್ಕ, ಅಂತರ್ಜಲ ವೃದ್ಧಿ ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಈ ಬ್ಯಾರೇಜ್ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.
ತಾ.ಪಂ. ಮಾಜಿ ಸದಸ್ಯ ಬಸವಣಪ್ಪ ಕುಡಳ್ಳಿ ಅವರು ಕನಕಪುರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮಂಜೂರಿಗೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಶರಣಪ್ಪ ಕೇಶ್ವಾರ ಅವರು, 99.2 ಮೀಟರ್ ಉದ್ದ, 2.5 ಮೀಟರ್ ಎತ್ತರದ ಈ ಬ್ರಿಜ್ ಕಂ ಬ್ಯಾರೇಜು 20 ಹಂತಗಳು ಹೊಂದಿರುತ್ತದೆ. 11 ತಿಂಗಳ ಕಾಲಮಿತಿಯಲ್ಲಿ ಕಾಮಗಾರಿ ಮುಗಿಯಲಿದೆ. ಗುಣಮಟ್ಟದ ಕೆಲಸ ನೀವು ಪಡೆಯಿರಿ. ನೀವೂ ಸಹಕಾರ ನೀಡಿದರೆ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಗದೇವಿ ಸಂಜೀವಕುಮಾರ ವಗ್ಗಿ, ಉಪಾಧ್ಯಕ್ಷ ಪ್ರಕಾಶರೆಡ್ಡಿ, ಜಗದೀಶಸಿಂಗ್ ಠಾಕೂರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೋಡ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಸತೀಶರೆಡ್ಡಿ ತಾಜಲಾಪುರ, ಹಣಮಂತ ಭೋವಿ, ರೇವಣಸಿದ್ದಯ್ಯ ಹಿರೇಮಠ, ಉಮಾ ಪಾಟೀಲ, ವೀರಭದ್ರಪ್ಪ ಮಲಕೂಡ, ವೀರಶೆಟ್ಟಿ ಗಾರಂಪಳ್ಳಿ ಹಾಗೂ ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.