ADVERTISEMENT

ಸೇತುವೆ ಮುಳುಗಡೆ: ಕಲಬುರಗಿ, ಚಿತ್ತಾಪುರ ಸಂಪರ್ಕ ಕಡಿತ

ಬೆಣ್ಣೆತೊರಾ ಜಲಾಶಯ: 27,500ಕ್ಯೂಸೆಕ್ ನೀರು ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:48 IST
Last Updated 23 ಸೆಪ್ಟೆಂಬರ್ 2025, 4:48 IST
ಕಾಳಗಿ ತಾಲ್ಲೂಕಿನ ಕಣಸೂರ ಗ್ರಾಮಕ್ಕೆ ಸೋಮವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿದರು
ಕಾಳಗಿ ತಾಲ್ಲೂಕಿನ ಕಣಸೂರ ಗ್ರಾಮಕ್ಕೆ ಸೋಮವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿದರು   

ಕಾಳಗಿ: ನಿರಂತರ ಮಳೆ ಹಾಗೂ ಗಂಡೋರಿ ನಾಲದ ನೀರಿನಿಂದ ತಾಲ್ಲೂಕಿನ ಹೇರೂರ (ಕೆ) ಬೆಣ್ಣೆತೊರಾ ಜಲಾಶಯದ ಒಳಹರಿವು ಹೆಚ್ಚಾಗಿ ಭಾನುವಾರ ಸಂಜೆ ಹೊರಬಿಡಲಾದ 55 ಸಾವಿರ ಕ್ಯೂಸೆಕ್ ನೀರನ್ನು ಸೋಮವಾರ ಮಧ್ಯಾಹ್ನದಿಂದ 27,500ಕ್ಯೂಸೆಕ್‌ಗೆ ಇಳಿಸಲಾಗಿದೆ.

ನದಿಪಾತ್ರದ ಹಳೆಹೆಬ್ಬಾಳ-65, ಕಣಸೂರ-48, ಮಲಘಾಣ-5, ತೆಂಗಳಿ-30, ಕಲಗುರ್ತಿ-10 ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆದು, ಸಂತ್ರಸ್ತರಿಗೆ ಊಟ, ಉಪಹಾರ, ವಸತಿ ವ್ಯವಸ್ಥೆ ಮಾಡಲಾಗಿದೆ.

ಕಲಬುರಗಿ-ಕಾಳಗಿ ಮುಖ್ಯರಸ್ತೆ ನಡುವಿನ ಕಣಸೂರ-ಗೋಟೂರ, ಮಲಘಾಣ-ಕಾಳಗಿ ಮತ್ತು ಚಿತ್ತಾಪುರ ಮಾರ್ಗದ ತೆಂಗಳಿ-ತೆಂಗಳಿ ಕ್ರಾಸ್ ರಸ್ತೆ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.

ADVERTISEMENT

ಕಾಳಗಿ-ಕಲಬುರಗಿ ಮಾರ್ಗದ ಎಲ್ಲ ಬಸ್ಸುಗಳು ಕೋಡ್ಲಿ, ರಟಕಲ್, ಮಹಾಗಾಂವ ರಸ್ತೆ ಮಾರ್ಗವಾಗಿ ಸಂಚರಿಸುತ್ತಿವೆ.

ಡೊಣ್ಣೂರ ಗ್ರಾಮಕ್ಕೆ ನೀರು ಸುತ್ತುವರೆದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರ್ಧಭಾಗ ಮುಳುಗಿದೆ. ಹಳೆಹೆಬ್ಬಾಳ, ಕಣಸೂರ, ತೆಂಗಳಿ, ಕಲಗುರ್ತಿ ಮತ್ತು ಮಲಘಾಣ ಗ್ರಾಮದಲ್ಲಿ ಅಗಸಿವರೆಗೆ ನೀರು ಬಂದಿದೆ. ಹೇರೂರ (ಕೆ) ಗ್ರಾಮದಿಂದ ತೊನಸಳ್ಳಿ (ಟಿ) ಗ್ರಾಮದವರೆಗೆ ನದಿಪಾತ್ರದ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಳುಮಾಡಿದೆ.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಉಪವಿಭಾಗ ಅಧಿಕಾರಿ ಸಾಹಿತ್ಯಾ ಆಲದಕಟ್ಟೆ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ವಿಕಾಸ ಸಜ್ಜನ, ರಾಘವೇಂದ್ರ, ಜಗದೇವಪ್ಪ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ತಾ.ಪಂ ಇಒ ಬಸಲಿಂಗಪ್ಪ ಡಿಗ್ಗಿ, ಸಿಪಿಐ ಜಗದೇವಪ್ಪ ಪಾಳಾ ಇತರ ಅಧಿಕಾರಿಗಳು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ಕಾಳಗಿ ತಾಲ್ಲೂಕಿನ ಹಳೆಹೆಬ್ಬಾಳ ಗ್ರಾಮ ಜಲಾವೃತಗೊಂಡಿದೆ
ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮಕ್ಕೆ ನೀರು ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.