
ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೂ ಜನರಿಗೆ ಪ್ರಯೋಜನವಾಗುತ್ತಿಲ್ಲ.
ಪಟ್ಟಣದ ಅಂಬೇಡ್ಕರ ವೃತ್ತದಿಂದ ಸುಲೇಪೇಟ ಹಳೆ ದಾರಿಗೆ ಸಂಪರ್ಕ ಬೆಸೆಯಲು ನಿರ್ಮಿಸಿದ ಸೇತುವೆ ಅಪೂರ್ಣವಾಗಿದೆ. ಸುಮಾರು ₹5 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ವೀರಭದ್ರೇಶ್ವರ ದೇವಾಲಯದ ಕಡೆಯ ರಸ್ತೆಗೆ ಸಂಪರ್ಕ ಬೆಸೆಯಲಾಗಿದೆ. ಆದರೆ, ಭೋವಿಗಲ್ಲಿ ಅಂಬೇಡ್ಕರ ವೃತ್ತ ಸಂಪರ್ಕಿಸುವ ರಸ್ತೆಗೆ ಸೇತುವೆ ಬೆಸೆದಿಲ್ಲ. ಅನುದಾನದ ಕೊರತೆಯಿಂದ ಸೇತುವೆ ಪೂರ್ಣಗೊಂಡಿಲ್ಲ ಎಂಬ ಆರೋಪ ನಾಗರಿಕರದ್ದಾಗಿದೆ.
ಗುತ್ತಿಗೆದಾರ ಅಂದಾಜು ಪಟ್ಟಿಯಲ್ಲಿರುವಷ್ಟು ಕೆಲಸ ಮಾಡಿ ತೆರಳಿದ್ದಾನೆ. ಈಗ ಒಂದುಬದಿಗೆ ಕೂಡು ರಸ್ತೆ ಜತೆಗೆ ಎರಡು–ಮೂರು ವೆಂಟ ಸೇತುವೆ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
2004 ರಿಂದ 2008 ಅವಧಿಯಲ್ಲಿ ಶಾಸಕರಾಗಿದ್ದ ವೈಜನಾಥ ಪಾಟೀಲ ಅವರ ಅವಧಿಯಲ್ಲಿ ಮುಲ್ಲಾಮಾರಿ ನದಿಯಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲು ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಕರೆಸಿ ಸಮೀಕ್ಷೆ ನಡೆಸಲಾಗಿತ್ತು.
2008 ರಿಂದ 2013ರ ಅವಧಿಯಲ್ಲಿ ಶಾಸಕರಾಗಿದ್ದ ಸುನೀಲ ವಲ್ಲ್ಯಾಪುರ ಅವರು ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಅಗತ್ಯ ಅನುದಾನ ಮಂಜೂರು ಮಾಡಿಸಿದ್ದರು. 2013 ರಿಂದ 2018ರ ಅವಧಿಯಲ್ಲಿ ಶಾಸಕರಾಗಿದ್ದ ಡಾ.ಉಮೇಶ ಜಾಧವ ಅನುದಾನ ಬಿಡುಗಡೆಗೆ ಒತ್ತಡ ಹೇರಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಗುದ್ದಲಿ ಪೂಜೆ ನಡೆಸಿದ್ದರು ಎಂದು ಅಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಅಬ್ದುಲ್ ಬಾಷೀತ್ ಸ್ಮರಿಸುತ್ತಾರೆ.
ಒಮ್ಮೆ ಕಾಮಗಾರಿ ನಡೆಯುವ ವೇಳೆ ಸೆಂಟ್ರಿಂಗ್ ಉರುಳಿ ಬಿದ್ದು ಕಾರ್ಮಿಕರು ಗಾಯಗೊಂಡಿದ್ದರು. ಸುಮಾರು ಒಂದುವರೆ ದಶಕ ಮೀರಿದ ಇತಿಹಾಸವಿರುವ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಂದು ಬದಿಗೆ ಕೂಡು ರಸ್ತೆಯಿದ್ದು, ಇನ್ನೊಂದು ಬದಿಗೆ ಕೂಡು ರಸ್ತೆ ನಿರ್ಮಿಸದ ಕಾರಣ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ ಮಣ್ಣು ಹಾಕಿ ಸಂಪರ್ಕ ಬೆಸೆಯಲಾಗಿದೆ. ಆದರೆ, ಸೇತುವೆಯ ಬೆಡ್ ಮತ್ತು ರಸ್ತೆಯ ಮಣ್ಣಿನ ಮಧ್ಯೆ ಸುಮಾರು ಒಂದುವರೆ ಅಡಿ ಎತ್ತರದ ಅಂತರವಿದೆ. ಮಹಿಳೆಯರು ಮಕ್ಕಳು, ವೃದ್ಧರು ಕುಳಿತು ರಸ್ತೆಯಿಂದ ಬೆಡ್ ಮೇಲೆ ಹತ್ತುವ ಸ್ಥಿತಿಯಿದೆ.
ಈ ಸೇತುವೆ ಪೂರ್ಣಗೊಂಡರೆ ಚಿಂಚೋಳಿಯಿಂದ ರೈತರು ತಮ್ಮ ಹೊಲಗಳಿಗೆ ತೆರಳಲು ಅನುಕೂಲವಾಗಲಿದೆ. ಈ ಸೇತುವೆ ಪೂರ್ಣಗೊಳ್ಳಲು ಅಂಬೇಡ್ಕರ ವೃತ್ತ ಮತ್ತು ಹಳೆ ಪೊಲೀಸ್ ಠಾಣೆಯ ದಾರಿಯಲ್ಲಿರುವ ಅಗಸಿ ಕಮಾನು ಸಂಧಿಸುವಂತೆ ರಸ್ತೆ ನಿರ್ಮಿಸಲು ಅಧಿಕಾರಿಗಳು ಯೋಜಿಸಿದ್ದಾರೆ.
ಮುಲ್ಲಾಮಾರಿ ನದಿಗೆ ಸೇತುವೆ ನಿರ್ಮಿಸಿದ್ದರಿಂದ ಚಿಂಚೋಳಿ ಪಟ್ಟಣದ ಹೆಚ್ಚಿನ ರೈತರಿಗೆ ನೀಮಾ ಹೊಸಳ್ಳಿ ಗೌಡನಹಳ್ಳಿ ಮತ್ತು ಸಿದ್ಧಸಿರಿ ಕಂಪನಿ ಸಂಪರ್ಕಿಸಲು ವರದಾನವಾಗಲಿದೆಅಬ್ದುಲ್ ಬಾಷೀತ್ ಚಿಂಚೋಳಿ ಪುರಸಭೆ ಸದಸ್ಯ
ಕಾಮಗಾರಿ ಪೂರ್ಣಗೊಳಿಸಲು ₹4.72 ಕೋಟಿ ಬೇಕಿದೆ. ಸದ್ಯ ₹1 ಕೋಟಿ ಅನುದಾನವಿದ್ದು ಉಳಿದ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಕೆಡಿಬಿಯಿಂದ ಅನುದಾನ ಕೊಡಿಸಲು ಶಾಸಕ ಡಾ.ಅವಿನಾಶ ಜಾಧವ ಅವರಿಗೂ ಮನವಿ ಮಾಡಲಾಗಿದೆ.ನಿಂಗಮ್ಮಾ ಬಿರಾದಾರ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.