ADVERTISEMENT

ಸಂಕ್ಷಿಪ್ತ ಸುದ್ದಿಗಳು: ಆಟೊಗಳ ದಾಖಲೆ ಪರಿಶೀಲನೆ ಇಂದು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 4:58 IST
Last Updated 5 ಫೆಬ್ರುವರಿ 2021, 4:58 IST

ಕಲಬುರ್ಗಿ: ಸೂಕ್ತ ದಾಖಲೆಗಳೇ ಇಲ್ಲದೇ ನಗರದಲ್ಲಿ ಓಡಾಡುತ್ತಿರುವ ಆಟೊಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇವುಗಳ ನಿಯಂತ್ರಣಕ್ಕಾಗಿ ಪೊಲೀಸ್‌ ಇಲಾಖೆ ಹಾಗೂ ಆರ್‌ಟಿಒ ಆಶ್ರಯದಲ್ಲಿ ನಗರದಲ್ಲಿ ಫೆ. 5ರಂದು ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಆಟೊಗಳ ಮಾಲೀಕರು ತಮ್ಮ ಆಟೊಗಳ ಪರವಾನಗಿ, ಚಾಲನಾ ಲೈಸನ್ಸ್‌, ವಿಮೆಯ ದಾಖಲೆಗಳು, ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಸಂಖ್ಯೆಯನ್ನು ಸಂಚಾರ ಪೊಲೀಸ್‌ ಠಾಣೆ– 1 ಮತ್ತು 2ರಲ್ಲಿ ನೀಡಬೇಕು. ಅಂಥ ಆಟೊಗಳಿಗೆ ಇಲಾಖೆಯಿಂದಲೇ ಸ್ಟಿಕ್ಕರ್‌ ಅಂಟಿಸಲಾಗುವುದು. ಅನಧಿಕೃತ ಆಟೊಗಳನ್ನು ಸೀಜ್‌ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಗವಾನ್‌ ಮುಖಕ್ಕೆ ಮಸಿ: ಸ್ವಾಗತ

ADVERTISEMENT

ಕಲಬುರ್ಗಿ: ‘ಪದೇಪದೇ ಹಿಂದೂಗಳನ್ನು ಹೀಯಾಳಿಸುವ ಕೆ.ಎಸ್‌. ಭಗವಾನ್‌ ಅವರ ಮುಖಕ್ಕೆ ಮೀರಾ ರಾಘವೇಂದ್ರ ಅವರು ಮಸಿ ಬಳಿದಿದ್ದು ಸ್ವಾಗತಾರ್ಹ. ಅಖಿಲ ಭಾರತ ಹಿಂದೂ ಮಹಾಸಭಾ ಯಾವಾಗಲೂ ಮೀರಾ ಅವರ ಬೆಂಬಲಕ್ಕೆ ನಿಲ್ಲುತ್ತದೆ’ ಎಂದು ಮಹಸಭಾದ ರಾಜ್ಯ ಘಟಕದ ಅಧ್ಯಕ್ಷರಾದ ಎಸ್‌.ಕೆ. ಸುವರ್ಣಾ, ಉಪಾಧ್ಯಕ್ಷ ದಿನಕರರಾವ್‌ ನಾರಾಯಣರಾವ್‌ ಕುಲಕರ್ಣಿ ತಿಳಿಸಿದ್ದಾರೆ.

‘ಹಿಂದೂಗಳನ್ನು ವಿನಾಕಾರಣ ಹೀಯಾಳಿಸಿ, ತಮ್ಮ ಪ್ರಚಾರಕ್ಕಾಗಿ ಇನ್ನೊಬ್ಬರ ಭಾವನೆಗೆ ಧಕ್ಕೆ ತರುವಂಥ ಭಗವಾನ್‌ ಅವರಿಗೆ ಮಸಿ ಬಳಿದಿದ್ದು ತಪ್ಪಲ್ಲ. ಮೀರಾ ಅವರ ವಿರುದ್ಧ ವಕೀಲರ ಅಸೋಸಿಯೇಷನ್‌ನಿಂದ ಯಾವುದೇ ಕ್ರಮ ಕೈಗೊಂಡರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ಉಚಿತ ತರಬೇತಿ ಶಿಬಿರ

ಕಲಬುರ್ಗಿ: ನಗರದ ಮೇತ್ರಿ ಐಎಎಸ್ ಮತ್ತು ಕೆಎಎಸ್ ಅಕಾಡೆಮಿಯಿಂದ ಪೆ. 7ರಂದು ಕಲ್ಯಾಣ ಕರ್ನಾಟಕ ಭಾಗದ ಕೆಎಎಸ್ ಮತ್ತು ಪಿಎಸ್‍ಐ ಆಕಾಂಕ್ಷಿಗಳಿಗೆ ಒಂದು ದಿನದ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಅಂದು ಬೆಳಿಗ್ಗೆ 9 ಗಂಟೆಗೆ ತರಬೇತಿ ಕೇಂದ್ರದ ಸಭಾಭವನದಲ್ಲಿ ಹಾಜರಿರಲು ಅಕಾಡೆಮಿ ನಿರ್ದೇಶಕ ದೇವಾನಂದ ಮೇತ್ರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8105185187 ಸಂಪರ್ಕಿಸಬಹುದು.

ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

ಕಲಬುರ್ಗಿ: ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರ ಜನ್ಮದಿನದ ಅಂಗವಾಗಿ ಇಲ್ಲಿನ ಜ್ಞಾನಜ್ಯೋತಿ ಕರಿಯರ್‌ ಅಕಾಡೆಮಿ ವತಿಯಿಂದ ಎಸ್‌ಡಿಎ, ಎಫ್‌ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ತಿಂಗಳ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಫೆ. 7ರಂದು ಬೆಳಿಗ್ಗೆ 9ಕ್ಕೆ ತರಬೇತಿ ಶಿಬಿರ ಉದ್ಘಾಟನೆಯಾಗಲಿದೆ. ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯ ಇವೆ. ಮಾದರಿ ಪರೀಕ್ಷೆಯನ್ನೂ ನಡೆಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಆಕಾಂಕ್ಷಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9480397516 ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.