ADVERTISEMENT

ಹಳೆ ವೈಷಮ್ಯ: ಸಹೋದರರ ಕೊಲೆ

ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ; ಬೆಚ್ಚಿ ಬಿದ್ದ ತಡಕಲ್‌ ಗ್ರಾಮಸ್ಥರು, ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 2:33 IST
Last Updated 16 ಜನವರಿ 2021, 2:33 IST
ನೀಲೇಶ
ನೀಲೇಶ   

ಕಮಲಾಪುರ: ತಾಲ್ಲೂಕಿನ ತಡಕಲ್‌ ಗ್ರಾಮದಲ್ಲಿ ಶುಕ್ರವಾರ, ಸಹೋದರರಿಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ತಡಕಲ್‌ ನಿವಾಸಿಗಳಾದ ನೀಲೇಶ ಅಯನರಾವ ಮೋರೆ (34) ಮತ್ತು ರಾಜು (ರಾಜಶೇಖರ) ಅಯನರಾವ ಮೋರೆ (25) ಕೊಲೆಯಾದವರು. ಇದೇ ಗ್ರಾಮದ ಚಂದ್ರು ಕಮಲಾಕರ ಮಾಂಗ (25) ಕೊಲೆ ಆರೋಪಿ. ಹತ್ಯೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಶುಕ್ರವಾರ ರಾತ್ರಿಯವರೆಗೂ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ನೀಲೇಶ ಹಾಗೂ ರಾಜು ಶುಕ್ರವಾರ ಬೆಳಿಗ್ಗೆ ಎದ್ದು ಸಮೀಪದ ಹಳ್ಳದಲ್ಲಿ ಮೀನುಗಳಿಗೆ ಬಲೆ ಹಾಕಿ ಗ್ರಾಮಕ್ಕೆ ಮರಳುತ್ತಿದ್ದರು. ದಾರಿಯಲ್ಲಿ ಅಂಗಡಿಯೊಂದರ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದರು. ಆರೋಪಿ ಚಂದ್ರು ಮನೆ ಸಹ ಹತ್ತಿರದಲ್ಲಿಯೇ ಇದೆ. ಸಹೋದರರು ಮಾತನಾಡುವ ಧ್ವನಿ ಕೇಳಿ ಮನೆಯಿಂದ ಹೊರಬಂದ ಚಂದ್ರು, ಅವರೊಂದಿಗೆ ಜಗಳ ಆರಂಭಿಸಿದ. ಅಣ್ಣ– ತಮ್ಮಂದಿರು ಒಂದಾಗಿ ಚಂದ್ರು ವಿರುದ್ಧ ಮಾತಿಗೆ ಮಾತು ಬೆಳೆಸಿ ಜಗಳವಾಡಿದರು. ಸುತ್ತ ಸೇರಿದ ಸಾರ್ವಜನಿಕರು ಜಗಳ ಬಿಡಿಸಿ ಮೂವರನ್ನೂ ಮನೆಗಳಿಗೆ ಕಳುಹಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಮನೆಗೆ ಮರಳಿದ ಚಂದ್ರು ತಲ್ವಾರ್‌ ತೆಗೆದುಕೊಂಡು ಬಂದು ದಾರಿಯಲ್ಲಿ ನಿಂತಿದ್ದ ನೀಲೇಶನನ್ನು ಭೀಕರವಾಗಿ ಕೊಚ್ಚಿ ಹಾಕಿದ. ಹತ್ತಿರದಲ್ಲೇ ಇದ್ದ ರಾಜು ಚಂದ್ರುವಿನ ದಾಳಿ ತಡೆಯಲು ಅಡ್ಡ ಬಂದ. ಆಗ ಆತನ ಮೇಲೂ ದಾಳಿ ಮಾಡಿದ ಚಂದ್ರು, ಕುತ್ತಿಗೆ ಭಾಗಕ್ಕೆ ಹೊಡೆದ. ಇದರಿಂದ ತೀವ್ರ ಗಾಯಗೊಂಡ ರಾಜು ಸ್ವಲ್ಪ ಸಮಯದಲ್ಲೇ ಅಸುನೀಗಿದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಳೆ ವೈಷಮ್ಯ ಕಾರಣವೇ?: ‘ಚಂದ್ರುಗೆ ಅಣ್ಣ– ತಮ್ಮ ಇಬ್ಬರೂ ಸೇರಿ ಹೊಡೆದಿದ್ದರು. ಇದೇ ಹಳೆ ವೈಷಮ್ಯದಿಂದ ಆಗಾಗ ಚಂದ್ರು ಮತ್ತು ನೀಲೇಶ ನಡುವೆ ಘರ್ಷಣೆ ಉಂಟಾಗುತ್ತಿದ್ದವು’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‍ಐ ಉಷಾ, ಸಿಬ್ಬಂದಿ ಕುಪೇಂದ್ರ, ರಾಜೇಂದ್ರ ರೆಡ್ಡಿ, ಅಶೋಕ ಮತ್ತಿತರರು ಭೇಟಿ ನೀಡಿ ಪರೀಶೀಲನೆ ನಡೆಸಿದರು. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಚ್ಚಿಬಿದ್ದ ಗ್ರಾಮಸ್ಥರು: ಗುರುವಾರವೇ ಮಕರ ಸಂಕ್ರಾಂತಿ ಮಾಡಿ ಹಬ್ಬದ ಸಂಭ್ರಮದಲ್ಲಿದ್ದ ತಡಕಲ್‌ ಗ್ರಾಮದ ಜನರಿಗೆ ದಿನ ಕಳೆದು ಬೆಳಗಾಗುವಷ್ಟರಲ್ಲಿ ದಿಗಿಲು ಬಡಿಯಿತು. ಬೆಳಿಗ್ಗೆಯೇ ನಡು ರಸ್ತೆಯಲ್ಲಿಯೇ ಸಹೋದರರ ಜೋಡಿ ಕೊಲೆ ಕಂಡು ಜನ ದಿಗಿಲುಗೊಂಡರು.

ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಮೃತಪಟ್ಟವರ ಕುಟುಂಬದ ಹೆಣ್ಣುಮಕ್ಕಳು ಸ್ಥಳಕ್ಕೆ ಧಾವಿಸಿದರು. ಸಹೋದರರಿಬ್ಬರೂ ರಕ್ತದ ಮಡುವಿನಲ್ಲಿ ಬಿದ್ದುದನ್ನು ಕಂಡ ಕುಟುಂಬದವರ ರೋದನ ಮುಗಿಲು ಮುಟ್ಟಿತು. ನೀಲೇಶನಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.