ADVERTISEMENT

ಅಂಬಿಗರ ಚೌಡಯ್ಯ ಮೂರ್ತಿ ವಿರೂಪ: ದುಷ್ಕರ್ಮಿಗಳ ಬಂಧನಕ್ಕೆ ಬಿಎಸ್‌ಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:44 IST
Last Updated 16 ಅಕ್ಟೋಬರ್ 2025, 7:44 IST
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಎಸ್‌ಪಿ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಎಸ್‌ಪಿ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಜಿಲ್ಲೆಯ ಶಹಾಬಾದ್‌ ತಾಲ್ಲೂಕಿನ ಮುತಗಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ವಿರೂಪಗೊಳಿಸಿದ್ದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್‌ ಪಟೇಲ್‌ ವೃತ್ತದಲ್ಲಿ ಸೇರಿದ ಬಿಎಸ್‌ಪಿ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಆನಂದ ಎಂ.ಮಸ್ಕಿ, ‘ಕ್ರಾಂತಿಕಾರಿ, ಸಮತಾವಾದಿ ಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ್ದ ಕೃತ್ಯ ಖಂಡನೀಯ. ಇದು ಸಮಾಜದಲ್ಲಿನ ಮನುವಾದಿ ಮನಸ್ಸುಗಳ ಕೃತ್ಯವಾಗಿದೆ. ಪ್ರತಿಮೆ ವಿರೂಪದ ಮೂಲಕ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮಕೈಗಳ್ಳಬೇಕು. ಅದೇ ಸ್ಥಳದಲ್ಲಿ ಹೊಸ ಪ್ರತಿಮೆ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಚೌಡಯ್ಯ ಸೇರಿದಂತೆ ಎಲ್ಲ ಮಹಾಪುರುಷರು ಈ ದೇಶದ ಆಸ್ತಿ. ಅವರನ್ನು ಅವಮಾನಿಸಿದರೆ ಇಡಿ ದೇಶಕ್ಕೇ ಅವಮಾನಿಸಿದಂತೆ. ಇಂಥ ಮೂರ್ತಿಗಳಿಗೆ ಅವಮಾನಿಸುವ ಕೆಲಸ ಇತ್ತೀಚೆಗೆ ಹೆಚ್ಚುತ್ತಿದೆ. ಅದನ್ನು ತಪ್ಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಪ್ರತಿಮೆ–ಪುತ್ಥಳಿಗಳಿಗೆ ಪಂಚಾಯಿತಿ ಅನುದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹಾಕುವಂತಾಗಬೇಕು. ಸಿಸಿಟಿವಿ ಕ್ಯಾಮೆರಾ ನಿಗಾ ಇಲ್ಲದ ಮೂರ್ತಿಗಳ ಉದ್ಘಾಟನೆಗೆ ಅವಕಾಶ ನೀಡಬಾರದು’ ಎಂದು ಪ್ರತಿಪಾದಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜ್ಯ ಕಾರ್ಯದರ್ಶಿಗಳಾದ ತಿಪ್ಪಣ್ಣ ಕಿನ್ನೂರ, ಅನಿಲ ಟೆಂಗಳಿ, ಶರಣು ಹಂಗರಗಿ, ಮಶಾಕ್‌ ಪಟೇಲ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.