ಜೇವರ್ಗಿ ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆಯಿಂದ ನೆಲದ ಮೇಲೆ ಕುಳಿತಿರುವ ಪ್ರಯಾಣಿಕರು
ಜೇವರ್ಗಿ: ಪಟ್ಟಣದ ಬಸ್ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಸ್‌ಗಳನ್ನು ನಿಲ್ಲಿಸದ ಕಾರಣ ಕಲಬುರಗಿ ನಗರಕ್ಕೆ ಪ್ರಯಾಣಿಸುವ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.
ಕಲಬುರಗಿ ನಗರಕ್ಕೆ ಜೇವರ್ಗಿ ಬಸ್ ನಿಲ್ದಾಣದಿಂದ ನಿತ್ಯ ನೂರಾರು ಬಸ್ ಗಳು ಓಡಾಡುತ್ತಿದ್ದು, ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಬಸ್‌ಗಳನ್ನು ಪ್ಲಾಟ್ ಫಾರಂನಲ್ಲಿ ನಿಲ್ಲಿಸುತ್ತಿಲ್ಲ. ಬದಲಾಗಿ ನಿಲ್ದಾಣದ ಗೇಟ್ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಂಡದಂತ ಬಿಸಿಲಿಗೆ ಜನ ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಪ್ರಯಾಣಿಕರು ಬಿಸಿಲಲ್ಲಿ ಬಸ್‌ಗಾಗಿ ಕಾಯುವಂತಾಗಿದೆ. ಹೀಗಿದ್ದರೂ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಕೆಲ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಿದರೂ, ಪ್ರಯಾಣಿಕರ ಪರದಾಟ ಮಾತ್ರ ತಪ್ಪುತ್ತಿಲ್ಲ.
ಪ್ರಯಾಣಿಕರ ಬಾಯಾರಿಕೆ ತಣಿಸಿಕೊಳ್ಳಬೇಕೆಂದರೆ ಖಾಸಗಿ ಹೋಟೆಲ್‌ಗಳಿಗೆ ತೆರಳಬೇಕಾಗಿ ಬಂದಿದೆ. ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಸೌಕರ್ಯ ಇಲ್ಲ. ನಿಲ್ದಾಣ ಗೋಡೆಗೆ ನಲ್ಲಿಗಳನ್ನು ಅಳವಡಿಸಲಾಗಿದ್ದು, ಬಿಸಿ ನೀರು ಸರಬರಾಜಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರಯಾಣಿಕರು ಬೇರೆ ದಾರಿ ಇಲ್ಲದೆ ಇದೇ ನೀರನ್ನು ಕುಡಿಯುತ್ತಾರೆ. ಬಹಳ ದಿನಗಳಿಂದ ಇದೇ ಪರಿಸ್ಥಿತಿ ಇದೆ.
ನಿತ್ಯ 500ಕ್ಕೂ ಹೆಚ್ಚು ಬಸ್‌ಗಳು ಜೇವರ್ಗಿ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಹೀಗಿದ್ದರೂ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲದೇ ನೆಲದ ಮೇಲೆ ಕುಳಿತುಕೊಳ್ಳುವಂತಾಗಿದೆ. ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೂ ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಜೇವರ್ಗಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಲಬುರಗಿಗೆ ತೆರಳುವ ಬಸ್‌ಗಳನ್ನು ನಿಗದಿಪಡಿಸಿದ ಪ್ಲಾಟ್ ಫಾರಂನಲ್ಲಿ ನಿಲ್ಲಿಸಬೇಕು. ನಿಲ್ದಾಣದ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು. ಪ್ರಯಾಣಿಕರಿಗಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕುಭೀಮರಾಯ ಹಳ್ಳಿ ಸ್ಥಳೀಯ ನಿವಾಸಿ
ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ವೃದ್ದರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಮಾಡಬೇಕು ಸ್ವಚ್ಚತೆ ಕಾಪಾಡಬೇಕುಸಂಗೀತಾ ಘಂಟಿಮಠ ಸ್ಥಳೀಯ ನಿವಾಸಿ
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಪಾದ ಶುದ್ದ ಕುಡಿಯುವ ನೀರು ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡದೇ ಇದ್ದರೇ ಹೋರಾಟ ಮಾಡಬೇಕಾಗುತ್ತದೆರಾಜಶೇಖರ ಭಂಟನೂರ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಖಾಸಗಿ ವಾಹನಗಳ ಹಾವಳಿ ತಪ್ಪಿಸಲು ಕಲಬುರಗಿಗೆ ತೆರಳುವ ಬಸ್‌ಗಳನ್ನು ನಿಲ್ದಾಣದ ಗೇಟ್ ಬಳಿ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ನೀರಿನ ಘಟಕ ದುರಸ‍್ಥಿ ಮಾಡಲಾಗುವುದುರವಿಕುಮಾರ ವಿಭಾಗ ಸಂಚಾರ ನಿಯಂತ್ರಣಾಧಿಕಾರಿ ಜೇವರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.