ADVERTISEMENT

ಬಾಳೆದಿಂಡು, ಕಬ್ಬು, ಕುಂಬಳಕಾಯಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:26 IST
Last Updated 11 ಅಕ್ಟೋಬರ್ 2021, 2:26 IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಭಾನುವಾರ ಗೃಹಿಣಿಯರು ಬಾಳೆಕಂದು ಹಾಗೂ ಕುಂಬಳಕಾಯಿ ಖರೀದಿಸಿದರು
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಭಾನುವಾರ ಗೃಹಿಣಿಯರು ಬಾಳೆಕಂದು ಹಾಗೂ ಕುಂಬಳಕಾಯಿ ಖರೀದಿಸಿದರು   

ಕಲಬುರಗಿ: ನಗರದ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯಲ್ಲಿ ಭಾನುವಾರ ಮತ್ತಷ್ಟು ಜನಸಂದಣಿ ಏರ್ಪಟ್ಟಿತು. ನವರಾತ್ರಿ ಉತ್ಸವದ ಜತೆಗೆ ವಾರದ ಕೊನೆ ದಿನವಾಗಿದ್ದರಿಂದ ಭಾನುವಾರ ವ್ಯಾಪಾರ ಬಿರುಸುಗೊಂಡಿತು.‌ ಹಬ್ಬದ ಆರಂಭದಿಂದಲೂ ಏರುಗತಿಯಲ್ಲಿರುವ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ದರ ಈಗ ಮತ್ತಷ್ಟು ಹೆಚ್ಚಾಗಿದೆ.

ನಗರದ ಕಣ್ಣಿ ಮಾರ್ಕೆಟ್‌, ಸೂಪರ್‌ ಮಾರ್ಕೆಟ್‌, ಶಹಾಬಜಾರ್‌, ರಾಮಮಂದಿರ ಸರ್ಕಲ್‌, ವಾಜಪೇಯಿ ಬಡಾವಣೆ ಸೇರಿ ಎಲ್ಲ ಕಡೆಯೂ ವಿವಿಧ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು. ಇದರಿಂದ ಇಡೀ ದಿನ ಜನಜಂಗುಳಿ ಕಂಡು ಬಂತು.

ಕಣ್ಣಿ ಮಾರ್ಕೆಟ್‌ನಲ್ಲಿ ಎಂದಿನಂತೆ ನಸುಕಿನ 5ರಿಂದಲೇ ವ್ಯಾಪಾರ ಚಟುವಟಿಕೆ ಆರಂಭವಾದವು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ರೈತರು ತರಕಾರಿ, ಹೂವು, ಕಬ್ಬು, ಬಾಳೆಲೆಯನ್ನು ವಾಹನಗಳಲ್ಲಿ ಹೇರಿಕೊಂಡು ಬಂದು ಮಾರುತ್ತಿರುವುದು ಕಂಡುಬಂತು.

ADVERTISEMENT

ಮತ್ತಷ್ಟು ಹೆಚ್ಚಿದ ದರ: ಹಬ್ಬದ ಮೊದಲ ದಿನ (ಅಕ್ಟೋಬರ್‌ 7) ₹ 800 ಇದ್ದ ಕೆ.ಜಿ ಮಲ್ಲಿಗೆ ಹೂವಿನ ದರದಲ್ಲಿ ₹ 30 ಏರಿಕೆಯಾಗಿದೆ. ಬೆಳಿಗ್ಗೆ ಒಂದು ಮೊಳ ಮಲ್ಲಿಗೆ ಹೂವಿನ ದರ ₹ 40 ಇತ್ತು, ಸಂಜೆಗೆ ₹ 30ಕ್ಕೆ ಉಳಿಕೆಯಾಗಿತ್ತು. ಆದರೆ, ಸೇವಂತಿ ದರ ಮಾತ್ರ ಇಡೀ ದಿನ ₹ 20ರಲ್ಲೇ ಇದ್ದುದು ಕಂಡುಬಂತು. ₹ 30 ಇದ್ದ ಚೆಂಡುಹೂವಿನ ದರ ₹ 50ಕ್ಕೆ ಏರಿಕೆಯಾಯಿತು.

ಹಬ್ಬಕ್ಕಾಗಿ ಖರೀದಿಸುವ ಕಬ್ಬಿನ ಜಲ್ಲೆ ಹಾಗೂ ಬಾಳೆ ಎಲೆ ಕಂದುಗಳೇ ಹೆಚ್ಚಾಗಿ ಮಾರಾಟವಾಗುತ್ತಿರುವುದು ಕಂಡುಬಂತು. ಹಬ್ಬಕ್ಕೂ ಮುಂಚೆ ಒಂದು ಜೊತೆ ಕಬ್ಬಿನ ಜಲ್ಲೆಗೆ ಶನಿವಾರ ₹ 50 ಇದ್ದ ದರ ಭಾನುವಾರ ₹ 80ಕ್ಕೆ ಏರಿಕೆಯಾಗಿತ್ತು. ಬಾಳೆ ದಿಂಡುಗಳ ದರ ಕೂಡ ₹ 50ರಿಂದ ₹ 80ಕ್ಕೆ ಏರಿದ್ದರಿಂದ ವ್ಯಾಪಾರಿಗಳು ಜೇಬುತುಂಬ ಹಣ ಎಣಿಸಿಕೊಂಡರು.‌ ಅದರಲ್ಲೂ ಕುಂಬಳಕಾಯಿ ದರ ಹೆಚ್ಚೂ–ಕಡಿಮೆ ದ್ವಿಗುಣಗೊಂಡಿದ್ದು ₹ 100ರಿಂದ 120ಕ್ಕೆ ಮಾರಾಟವಾಯಿತು.

‘ಮಾರುಕಟ್ಟೆಗೆ ನಸುಕಿನ 4 ಗಂಟೆಗೆ ಒಂದು ಟಂಟಂನಷ್ಟು ಕಬ್ಬು ಹಾಗೂ ಮತ್ತೊಂದು ಟಂಟಂನಲ್ಲಿ ಬಾಳೆದಿಂಡು ತಂದಿದ್ದೇನೆ. ಸಂಜೆ 5ರ ಹೊತ್ತಿಗೆ ಬಹುಪಾಲು ಮಾರಾಟವಾಗಿದೆ. ಕಳೆದ ಮೂರು ದಿನಗಳಿಗಿಂತ ಭಾನುವಾರ ಅತಿಹೆಚ್ಚು ವ್ಯಾಪಾರವಾಗಿದೆ’ ಎಂದರು ಪಟ್ಟಣ ಗ್ರಾಮದ ರೈತ ಗಣೇಶ.

ಹಣ್ಣು ಕೊಳ್ಳುವವರ ಸಂಖ್ಯೆಯೂ ಏರಿದ್ದರಿಂದ ಸಹಜವಾಗಿಯೇ ದರ ಗಗನಮುಖಿಯಾಗಿತ್ತು. ಐದು ಸೇಬು ಹಣ್ಣುಗಳ ಒಂದು ಗುಂಪಿಗೆ ₹ 100, ದಾಳಿಂಬೆಗೆ ₹ 140, ಕೆ.ಜಿ. ಬಾಳೆಹಣ್ಣಿಗೆ ₹ 50, ಪಪ್ಪಾಯ ₹ 50 ದರ ಕೇಳಿಬಂತು.

ವ್ಯಾಪಾರಕ್ಕೆ ಮಳೆ ಅಡ್ಡಿ: ಹಬ್ಬದ ಖರೀದಿ ಭರಾಟೆಯಲ್ಲಿ ಜನರಿಗೆ ಮಧ್ಯಾಹ್ನ ದಿಢೀರನೇ ಸುರಿದ ಧಾರಾಕಾರ ಮಳೆಯಿಂದ ತುಸು ಹಿನ್ನಡೆಯಾಯಿತು. ಮಾರುಕಟ್ಟೆಯಲ್ಲಿ ಗಿಜಗುಡುತ್ತಿದ್ದ ಜನ ತಕ್ಷಣ ಚೆಲ್ಲಾಪಿಲ್ಲಿಯಾದರು. ನಿರಂತರ ಎರಡು ತಾಸುಗಳ ಮಳೆಯ ನಂತರ, ಇಳಿಸಂಜೆಗೆ ಮತ್ತೆ ವ್ಯಾಪಾರ ಚೇತರಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.