ADVERTISEMENT

ಕೋಮುವಾದಿಗಳನ್ನು ದೂರವಿಡಲು ಜೆಡಿಎಸ್ ಬೆಂಬಲಿಸಬೇಕಿತ್ತು: ಇಬ್ರಾಹಿಂ

ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಪತ್ರಿಕಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 4:33 IST
Last Updated 5 ಜೂನ್ 2022, 4:33 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಕಲಬುರಗಿ: ‘ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ದೂರವಿಡಲು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕಿತ್ತು. ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಕೈಮುಗಿದು ಕೇಳಿಕೊಂಡಿದ್ದೆವು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

‘ಜಾತ್ಯತೀತ ಶಕ್ತಿಗಳೆಲ್ಲ ಒಂದಾಗುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹಟ ಹಿಡಿದಿರುವುದು ಸರಿಯಲ್ಲ. ಈ ಕುರಿತು ನಾವು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೊಂದಿಗೂ ಮಾತನಾಡಿದ್ದೆವು’ ಎಂದರು.‌

‘ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನಿಟ್ಟುಕೊಂಡು ಮತದಾರರ ಬಳಿ ಹೋಗಲು ಎಚ್‌.ಡಿ.ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ. ಇದನ್ನು ಅದಾಗಲೇ ಜನತಾ ಜಲಧಾರೆ ಸಮಾವೇಶದಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯವರಿಗೆ ಎರಡು ಬಾರಿ ಅವಕಾಶ ನೀಡಿದ ಮತದಾರರು ಒಂದು ಬಾರಿ ಜೆಡಿಎಸ್‌ ಬೆಂಬಲಿಸಬೇಕು. ಒಂದೊಮ್ಮೆ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ನಾವು ಮತ್ತೆ ಮತದಾರರ ಬಳಿ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸದ್ಯಕ್ಕೆ ಪಕ್ಷದಿಂದ ಅಭ್ಯರ್ಥಿಗಳ ಹೆಸರನ್ನು ಘೋಷಿಸುವುದಿಲ್ಲ. ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದ ಸಂಸದೀಯ ಸಮಿತಿಯು ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ’ ಎಂದರು.

‘ಬಸವರಾಜ ಹೊರಟ್ಟಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ಏಳ ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಕೊಂಡಿದ್ದಾರೆ. ಎಂಟನೇ ಹೆರಿಗೆಗಾಗಿ ಬಿಜೆಪಿಗೆ ಹೋಗಿದ್ದಾರೆ. ಎಂಟನೇ ಹೆರಿಯಾಗುವುದು ಅನುಮಾನವಿದೆ. ವೈಎಸ್‌ವಿ ದತ್ತಾ ಅವರೂ ಕಾಂಗ್ರೆಸ್ ಸೇರ್ಪಡೆಯಾಗುವ ಮಾತುಗಳು ಕೇಳಿ ಬರುತ್ತಿದ್ದು, ಪಕ್ಷ ಆ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ನಮ್ಮದೇನಿದ್ದರೂ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಜನಗಳ ಬಳಿ ಹೋಗುವುದಾಗಿದೆ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.