ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 15:25 IST
Last Updated 15 ಡಿಸೆಂಬರ್ 2019, 15:25 IST
ಪೌರತ್ವ (ತಿದ್ದುಪಡಿ) ಮಸೂದೆ ಖಂಡಿಸಿ ಕಲಬುರ್ಗಿಯಲ್ಲಿ ಭಾನುವಾರ ನಡೆದ ಪ್ರತಿಭಟನೆ ನಡೆಯಿತು
ಪೌರತ್ವ (ತಿದ್ದುಪಡಿ) ಮಸೂದೆ ಖಂಡಿಸಿ ಕಲಬುರ್ಗಿಯಲ್ಲಿ ಭಾನುವಾರ ನಡೆದ ಪ್ರತಿಭಟನೆ ನಡೆಯಿತು   

ಕಲಬುರ್ಗಿ: ‘ದೇಶದ ಎಲ್ಲೆಡೆ ಕೋಮುದ್ವೇಷ ಹಬ್ಬಿಸುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕೃಷಿ ಕೂಲಿಕಾರರ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ಜಗತ್‌ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಘೋಷಣೆ ಮೊಳಗಿಸಿದರು.

‘ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು. ಧರ್ಮಗಳ ನಡುವೆ ಗೋಡೆಗಳನ್ನು ಕುಟ್ಟಿ ಕೆಡಹುವೆವು’ ಎಂಬುದು ಶತಮಾನ ಕಾಲದ ಸ್ವಾತಂತ್ರ್ಯ ಚಳವಳಿಯ ಆಶಯ. ಈ ಪ್ರಮುಖ ಆಶಯ ನಮ್ಮ ದೇಶದ ಸಂವಿಧಾನದಲ್ಲಿಯೂ ಇದೆ. ಆದರೆ, ಸಂವಿಧಾನವನ್ನೂ ಧಿಕ್ಕರಿಸಿ ಇಂಥ ಮಸೂದೆಗಳನ್ನು ಜಾರಿ ಮಾಡಿದ್ದು ಖಂಡನಾರ್ಹ’ ಎಂದು ಜನವಾದಿ ಸಂಘಟನೆಯ ಕೆ.ನೀಲಾ ಆಕ್ರೋಶ ಹೊರಹಾಕಿದರು.

ADVERTISEMENT

‘ದೇಶದಲ್ಲಿನ ಅಭಿವೃದ್ಧಿ ಯೋಜನೆ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಗುರಿ. ಆದರೆ, ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಆರ್‌ಎಸ್‌ಎಸ್‌ ಕೂಟ. ತಮ್ಮ ಧರ್ಮಾಂಧ ಬುದ್ಧಿ ಬಳಸಿ ಸಮಾನತೆಯನ್ನೇ ಕಿತ್ತೆಸೆಯುವ ಹುನ್ನಾರ ನಡೆಸಿದೆ. ಧರ್ಮಗಳ ನಡುವೆ ವಿಭಜನೆ ತರುವ, ದ್ವೇಷ ಹಬ್ಬಿಸುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದು ದುಡಿಯುವ ಜನತೆಯ ಏಕತೆಗೆ ಬಹು ದೊಡ್ಡ ಪೆಟ್ಟು’ ಎಂದರು.

‘ಈಗಾಗಲೇ ಪೌರತ್ವ ನೋಂದಣಿ ಮಾಡಿರುವ ಅಸ್ಸಾಂನಲ್ಲಿ 19 ಲಕ್ಷ ಪ್ರಜೆಗಳನ್ನು ಅನಾಥ ಮಾಡಲಾಗಿದೆ. ನಿರ್ಬಂಧಿತ ಕ್ಯಾಂಪ್‌ಗಳಲ್ಲಿ ಕೂಡಿ ಹಾಕಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮತ್ತು ದೇಶದ ಸಂಪತ್ತನ್ನು ಲೂಟಿ ಮಾಡಿ, ಜನಾಂಗೀಯ ದ್ವೇಷ ಹುಟ್ಟು ಹಾಕುವ ಅಜೆಂಡಾವನ್ನೇ ಕಾಯ್ದೆ ರೂಪದಲ್ಲಿ ಜಾರಿ ಮಾಡಲಾಗಿದೆ’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ದೂರಿದರು.

‘ಈಗಾಗಲೇ ದೇಶದ ಆರು ರಾಜ್ಯಗಳು ಈ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕವೂ ಈ ಕಾಯ್ದೆ ಜಾರಿ ಮಾಡುವುದಿಲ್ಲವೆಂದು ಘೋಷಿಸಬೇಕು’ ಎಂದೂ ಆಗ್ರಹಿಸಿದರು.

ಮುಖಂಡರಾದ ಜಿ.ಎನ್‌. ನಾಗರಾಜ್, ಚಂದ್ರಪ್ಪ ಹೊಸ್ಕೇರಾ, ಮಾರುತಿ ಗೋಖಲೆ, ಎಂ.ಬಿ. ಸಜ್ಜನ್, ಪಿ.ಕೆ.ತಿವಾರಿ, ಭೀಮಶೆಟ್ಟಿ ಯಂಪಳ್ಳಿ, ಚಂದಪ್ಪ ಪೂಜಾರಿ, ಹನುಮೇಗೌಡ, ಡಾ.ಕಾಶಿನಾಥ ಅಂಬಲಗಿ, ವಿಠಲ ಚಿಕಣಿ, ದತ್ತಾತ್ರೇಯ ಇಕ್ಕಳಕಿ ನೇತೃತ್ವ ವಹಿಸಿದ್ದರು.

ಜಗತ್‌ ವೃತ್ತದ ಅಂಬೇಡ್ಕರ್‌ ಪ್ರತಿಮೆ ಎದುರು ಕೆಲಕಾಲ ಧರಣಿ ನಡೆಸಿದ ಕಾರ್ಯಕರ್ತರು, ಮಸೂದೆಯ ಜೆರಾಕ್ಸ್‌ ಪ್ರತಿಗಳನ್ನು ಹರಿದು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.