ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಕಲ್ಲತ್ತಾ(ಮಹಾಲಕ್ಷ್ಮೀ) ದೇವಿ ಜಾತ್ರಾ ಮಹೋತ್ಸವ ಭಕ್ತರ ಜಯಘೋಷದೊಂದಿಗೆ ಅದ್ಧೂರಿಯಾಗಿ ಆರಂಭವಾಗಿದೆ.
ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಜತೆಗೆ ಡೊಳ್ಳಿನ ಮೇಳದವರು ಅದ್ಧೂರಿ ಮೆರವಣಿಗೆ ನಡೆಸುತ್ತಾರೆ.
ಅಲ್ಲದೇ ಈ ಜಾತ್ರೆಯ ವಿಶೇಷವೆಂದರೆ, ಹುಳಿಬಾನ ತಯಾರಿಸುವುದು. ದೇವಸ್ಥಾನದ ಸಮಿತಿ ವತಿಯಿಂದ ಹಾಲುಮತದ ಸಮಾಜದರವರಿಗೆ ನೀಡುವ ಜೋಳ ತೆಗೆದುಕೊಂಡು ಪ್ರತಿವರ್ಷ ಹುಳಿಬಾನ ತಯಾರಿಸಿ, ಭಕ್ತರಿಗೆ ವಿತರಿಸಲಾಗುತ್ತದೆ. ಪ್ರತಿವರ್ಷ ಸಮಿತಿಯಿಂದ 16 ಕ್ವಿಂಟಾಲ್ ಜೋಳದ ಹುಳಿಬಾನ ಸಿದ್ಧಪಡಿಸಲಾಗುತ್ತದೆ.
ಜೋಳದಿಂದ ತಯಾರಿಸುವ ಹುಳಿಬಾನವನ್ನು ಜಾತ್ರೆಯಲ್ಲಿ ಪ್ರತಿನಿತ್ಯ, ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ. ಜಾತ್ರೆಗೆ ಬರುವ ಪ್ರತಿಯೊಬ್ಬರೂ ಹುಳಿಬಾನದ ಸವಿ ಸವಿಯದೆ ಮರಳುವುದಿಲ್ಲ. ಇದು ದೇಹಕ್ಕೆ ಆರೋಗ್ಯಕರವಾಗಿದ್ದು, ಹುಳಿಬಾನದ ಮೇಲಿನ ಪ್ರೀತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಪಟ್ಟಣದ ಮಾಳಿಂಗರಾಯನ ದೇವಸ್ಥಾನದಲ್ಲಿ ಹುಳಿಬಾನ ವಿತರಣೆಯ ವ್ಯವಸ್ಥೆ ಮಾಡಲಾಗುತ್ತದೆ. ತಯಾರಿಸಿದ ನಾಲ್ಕೈದು ಗಂಟೆಗಳಲ್ಲಿ ಖಾಲಿಯಾಗುತ್ತದೆ. ಹಾಲುಮತ ಸಮಾಜದ ರಾಮಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಚಂದ್ರಶೇಖರ ಕುನ್ನೂರ, ಶರಣಗೌಡ ಸರಡಗಿ, ಕಾಮಣ್ಣ ಹಿರಿಪೂಜಾರಿ, ಮಂಗಣ್ಣ ಹಿರಿಪೂಜಾರಿ, ಶರಣಬಸು ಯಡ್ರಾಮಿ, ರಾಜು ರದ್ದೇವಾಡಗಿ, ಬಸಣ್ಣ ಪೂಜಾರಿ, ಮರೆಪ್ಪ ಸರಡಗಿ, ಚಂದ್ರಶೇಖರ ಕುನ್ನೂರ, ಲಿಂಗರಾಜ ಮಾಸ್ಟರ ಸೇರಿದಂತೆ ಮತ್ತಿತರರು ಇದ್ದರು.
ಹುಳಿಬಾನ ತಯಾರಿಸುವ ವಿಧಾನ: ಜೋಳ ನೆನೆಸಿ, ನಂತರ ಒಣಗಿಸಲಾಗುತ್ತದೆ. ಅದನ್ನು ಸರಿಯಾಗಿ ಒರಳಿನಲ್ಲಿ ಹಾಕಿ, ಕುಟ್ಟಿ ಜೋಳದ ಮೇಲಿನ ಪದರನ್ನು ಬೇರ್ಪಡಿಸಲಾಗುತ್ತದೆ. ಬಳಿಕ ಹುಳಿಬಾನನ್ನು ಸಿದ್ಧಪಡಿಸಲಾಗುತ್ತದೆ. ಈ ಹುಳಿಬಾನಿನಲ್ಲಿ ಜೀರಿಗೆ, ಬಳ್ಳೊಳ್ಳಿ, ಉಪ್ಪು, ಮಜ್ಜಿಗೆ ಸೇರಿಸಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ 10–15 ದಿನಗಳವರೆಗೆ ನಿರಂತರವಾಗಿ ಜೋಳವನ್ನು ನೀರಿನಲ್ಲಿ ತೊಳೆದು, ಹದಗೊಳಿಸಿದ ನಂತರ ಪ್ರತಿದಿನ 100 ಮಣ್ಣಿನ ಮಡಿಕೆಗಳಲ್ಲಿ ಹುಳಿಬಾನವನ್ನು ಸಿದ್ಧಪಡಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.