ADVERTISEMENT

ಅತ್ಯಾಚಾರ, ಕೊಲೆ ಖಂಡಿಸಿ ಮೋಂಬತ್ತಿ ಮೆರವಣಿಗೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದ ಎಐಡಿಎಸ್‌ಒ ಕಾರ್ಯಕರ್ತರು, ಪೊಲೀಸರ ವಿರುದ್ಧವೂ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 16:26 IST
Last Updated 13 ಅಕ್ಟೋಬರ್ 2020, 16:26 IST
ಉತ್ತರಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಕಲಬುರ್ಗಿಯಲ್ಲಿ ಮಂಗಳವಾರ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ಮೋಂಬತ್ತಿ ಮೆರವಣಿಗೆ ನಡೆಸಲಾಯಿತು
ಉತ್ತರಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಕಲಬುರ್ಗಿಯಲ್ಲಿ ಮಂಗಳವಾರ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ಮೋಂಬತ್ತಿ ಮೆರವಣಿಗೆ ನಡೆಸಲಾಯಿತು   

ಕಲಬುರ್ಗಿ: ಉತ್ತರಪ್ರದೇಶದಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಮಂಗಳವಾರ ಮೋಂಬತ್ತಿ ಮೆರವಣಿಗೆ ನಡೆಸಲಾಯಿತು.

ಅತ್ಯಾಚಾರ ಕೃತ್ಯ ಖಂಡಿಸಿ ಹಾಗೂ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಮ್ಮಿಕೊಂಡಿದ್ದ ಸಂಘರ್ಷ ಸಪ್ತಾಹದ ಸಮಾರೋಪದ ಅಂಗವಾಗಿ ಈ ಪ್ರತಿಭಟನೆ ತೋರಲಾಯಿತು.

‘ಉತ್ತರಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ 20 ವರ್ಷದ ಪರಿಶಿಷ್ಟ ಯುವತಿ ಮೇಲೆ ನಡೆದ ಅಮಾನುಷ ಘಟನೆ ಮನುಕುಲವೇ ತಲೆ ತಗ್ಗಿಸುವಂಥದ್ದು. ಸಂತ್ರಸ್ತೆ ಪೊಲೀಸ್‌ ಠಾಣೆಗೆ ಹೋದರೂ ಕನಿಷ್ಠ ಮಾನವೀತೆ ತೋರದ ಪೊಲೀಸರು ಗಂಟೆಗಟ್ಟಲೇ ಕಾಯಿಸಿದ್ದಾರೆ. ಕೊನೆಗೆ ಆಕೆಯ ಪಾಲಕರೇ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟಾದರೂ ಪೊಲೀಸರಾಗಲೀ, ಯೋಗಿ ಆದಿತ್ಯನಾಥ ಅವರಾಗಲೀ ಕಿಂಚಿತ್ತೂ ಮಾನವೀಯತೆ ಮೆರೆದಿಲ್ಲ. ಸಂತ್ರಸ್ತೆ ಪಾಲಕರಿಗೆ ಧೈರ್ಯ ನೀಡಿಲ್ಲ. ಇದಕ್ಕಿಂತ ಅಮಾನವೀಯ ನಡೆ ಇನ್ನೇನಿದೆ?’ ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು.

ADVERTISEMENT

‘ಯುವತಿ ಅತ್ಯಾಚಾರಿಗಳ ಹೆಸರು ಹೇಳಿದ ಮೇಲೆ ಅವರನ್ನು ಬಂಧಿಸಿದ್ದಾರೆ. ಆದರೆ, 15 ದಿನ ತೀವ್ರ ನರಳಾಡಿ ಆಕೆ ಸಾಯುವ ಸ್ಥಿತಿಗೆ ಬರಲು ಪೊಲೀಸರೇ ನೇರ ಕಾರಣವಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳನ್ನೂ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು. ದೇಶದಲ್ಲಿ ಎಲ್ಲಿಯೂ ಇಂಥ ಘಟನೆ ಮರುಕಳಿಸದಂತೆ ಕಾನೂನು ರೂಪಿಸಬೇಕು’ ಎಂದೂ ಆಗ್ರಹಿಸಿದರು.

‘ಯುವತಿಯ ಮನೆಯವರಿಗೆ ತಿಳಿಸದೆಯೇ ಶವ ಸುಟ್ಟಿದ್ದು ಖಂಡನಾರ್ಹ. ‘ಈ ಹೋರಾಟ ಸರ್ಕಾರದ ವಿರುದ್ಧದ ಅಂತರರಾಷ್ಟ್ರೀಯ ಷಡ್ಯಂತ್ರ’ ಎಂದು ಹೇಳಿರುವ ಉತ್ತರಪ್ರದೇಶ ಮುಖ್ಯಮಂತ್ರಿಗಳ ಹೇಳಿಕೆ ನಾಚಿಕೆಗೇಡಿನ ಸಂಗತಿ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದಾಗಿ ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇಂಥದರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧ ನೀತಿಗಳನ್ನು ಜಾರಿ ಮಾಡುತ್ತಿದೆ. ಇದನ್ನು ಕೈಬಿಡಬೇಕು’ ಎಂದೂ ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣುಮಂತ ಎಸ್.ಎಚ್., ಕಾರ್ಯದರ್ಶಿ ಈರಣ್ಣ ಇಸಬಾ, ಗೌರಮ್ಮ ಸಿ.ಕೆ., ಜಗನ್ನಾತ ಎಸ್.ಎಚ್,ಕೆ.ಬಿ.ಎನ್ ಅಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಝಿನತ್‌, ಡಾ.ರೈಜಾ, ಸ್ನೆಹಾ ಕಟ್ಟಿಮನಿ, ನಾಗರಾಜ, ಭೀಮಶಂಕರ, ರೆವಣಸಿದ್ಧ ಎಸ್.ಜಿ. ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.