ADVERTISEMENT

ಕಲಬುರ್ಗಿ: ಕೆರೆಯಲ್ಲಿದ್ದ ಮೊಸಳೆ ಮರಿ ಸೆರೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 13:19 IST
Last Updated 15 ಜುಲೈ 2021, 13:19 IST
ರಾಜಾಪುರದ ಸಣ್ಣ ಕೆರೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಮರಿಯನ್ನು ಸೆರೆ ಹಿಡಿದಿದ್ದಾರೆ.
ರಾಜಾಪುರದ ಸಣ್ಣ ಕೆರೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಮರಿಯನ್ನು ಸೆರೆ ಹಿಡಿದಿದ್ದಾರೆ.    

ಕಲಬುರ್ಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಹಿಂಬದಿಯಲ್ಲಿರುವ ರಾಜಾಪುರದ ಸಣ್ಣ ಕೆರೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸಂಜೆ ಮೊಸಳೆ ಮರಿಯನ್ನು ಸೆರೆ ಹಿಡಿದಿದ್ದಾರೆ. ಇನ್ನೊಂದು ದೊಡ್ಡ ಮೊಸಳೆ ಇರುವ ಶಂಕೆ ಇದ್ದು, ಅದನ್ನು ಅಲ್ಲಿಂದ ಸೆರೆ ಹಿಡಿಯಲು ಇಲಾಖೆಯ ತಂಡ ಶುಕ್ರವಾರ ಕಾರ್ಯಾಚರಣೆ ನಡೆಸಲಿದೆ.

ಕೆಲವು ದಿನಗಳ ಹಿಂದೆ ಮೊಸಳೆ ಮರಿ ಸಣ್ಣ ಕೆರೆಯಲ್ಲಿ ಇರುವ ಬಗ್ಗೆ ನಿವಾಸಿಗಳು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಸಂಬಂಧದ ವಿಡಿಯೊ ಹಾಗೂ ಚಿತ್ರಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಹೀಗಾಗಿ, ಎರಡೂ ಮೊಸಳೆಗಳನ್ನು ಹಿಡಿಯಲೆಂದು ಅರಣ್ಯ ಇಲಾಖೆ ಸಿಬ್ಬಂದಿ ಬಲೆಯೊಂದಿಗೆ ಬಂದಿದ್ದರು. ಮಧ್ಯಾಹ್ನ ಒಂದು ಬಾರಿ ಪ್ರಯತ್ನ ನಡೆಸಿದರಾದರೂ ವಿಫಲವಾಯಿತು. ನಂತರ ಮತ್ತೊಮ್ಮೆ ಪ್ರಯತ್ನ ನಡೆಸಿದಾಗ ಮೊಸಳೆ ಮರಿ ಸೆರೆ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ, ‘ಎರಡು ಮೊಸಳೆಗಳು ಇರುವ ಬಗ್ಗೆ ನಿವಾಸಿಗಳು ಮಾಹಿತಿ ನೀಡಿದ್ದರು. ಅದರಲ್ಲಿ ಒಂದನ್ನು ಹಿಡಿದು ನಗರದ ಸಾರ್ವಜನಿಕ ಉದ್ಯಾನದ ಬಳಿ ಇರುವ ಪ್ರಾಣಿ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಮತ್ತೊಂದು ಮೊಸಳೆ ಇರುವ ಮಾಹಿತಿ ಇದ್ದು, ಶುಕ್ರವಾರ ಬೆಳಿಗ್ಗೆ ಮತ್ತೊಮ್ಮೆ ಕಾರ್ಯಾಚರಣೆ ನಡೆಸಲಿದ್ದೇವೆ’ ಎಂದರು.

ADVERTISEMENT

‘ಮೊಸಳೆ ಮರಿ ಒಂದು ವರ್ಷದ್ದು ಇರಬಹುದು’ ಎಂದು ಹೇಳಿದರು.

ವಾರದ ಹಿಂದೆ ರಾಜಾಪುರದ ಸಣ್ಣ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಭೀತಿ ಆವರಿಸಿತ್ತು.

ಕೆಲ ವರ್ಷಗಳ ಹಿಂದೆ ಕಲಬುರ್ಗಿ ನಗರದ ಮಧ್ಯಭಾಗದಲ್ಲಿರುವ ಅಪ್ಪನ ಕೆರೆಯಲ್ಲಿ ಮೊಸಳೆಯೊಂದು ಸೆರೆಸಿಕ್ಕಿತ್ತು. ಅದನ್ನು ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ಸ್ಥಳಾಂತರಿಸಲಾಗಿದೆ. ಈ ಮೊಸಳೆ ಆಗಾಗ ಪ್ರವಾಸಿಗರಿಗೆ ದರ್ಶನ ನೀಡುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.