ADVERTISEMENT

‘ಎಸ್‌ಸಿ ಸಮೀಕ್ಷೆ; ಮಾದಿಗ ಎಂದೇ ನಮೂದಿಸಿ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:26 IST
Last Updated 8 ಮೇ 2025, 15:26 IST

ಕಲಬುರಗಿ: ‘ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು, ಜಾತಿಯ 61ರ ಕಾಲಂನಲ್ಲಿ ‘ಮಾದಿಗ’ ಎಂದೇ ನಮೂದಿಸಬೇಕು’ ಎಂದು ಜಿಲ್ಲಾ ಮಾದಿಗ ಸಮಾಜದ ಮುಖಂಡ ರಾಜು ವಾಡೇಕರ್ ಕೋರಿದರು.

‌‘ಸಮೀಕ್ಷೆ ಪ್ರತಿಯ 22ನೇ ಕಾಲಂನಲ್ಲಿ ಇರುವ ‘ಮಾದರ್’ ಪದದತ್ತ ಯಾರೂ ಗಮನ ನೀಡಬಾರದು. ‘ಮಾದರ್’ ಸಮುದಾಯ ನಮ್ಮ ಪ್ರದೇಶದಲ್ಲಿಯೇ ಇಲ್ಲ. ಅದರ ಬದಲು ‘ಮಾದಿಗ’ ಎಂದು ಬರೆಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ದತ್ತಾಂಶ ಸಂಗ್ರಹದ ಸಮೀಕ್ಷೆಯು ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಆದರೆ, ಕೆಲವು ಗಣತಿದಾರರು ಸರಿಯಾಗಿ ಸಮೀಕ್ಷೆ ಮಾಡುತ್ತಿಲ್ಲ. ದಿನಕ್ಕೆ ನಾಲ್ಕೈದು ಮನೆಗಳಿಗೆ ಭೇಟಿ ನೀಡುತ್ತಿರುವುದು ಕಂಡುಬರುತ್ತಿದೆ. ಮನೆ– ಮನೆಗೆ ಭೇಟಿ ನೀಡಿ ಸಮರ್ಪಕವಾಗಿ ಸಮೀಕ್ಷೆ ನಡೆಸುವಂತೆ ಗಣತಿದಾರರಿಗೆ ಸೂಚನೆ ಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮುಖಂಡ ಎಚ್.ನಾಗೇಶ ಮಾತನಾಡಿ, ‘ಸಮೀಕ್ಷೆಗೆ ಬರುತ್ತಿರುವ ಕೆಲ ಗಣತಿದಾರರು ತಮ್ಮ ಮೊಬೈಲ್‌ನಲ್ಲಿ ಸರ್ವರ್ ಸಮಸ್ಯೆ, ಸಾಫ್ಟ್‌ವೇರ್ ಸಮಸ್ಯೆಯಾಗುತ್ತಿದೆ ಎನ್ನುತ್ತಿದ್ದಾರೆ. ಒಂದು ಕುಟುಂಬದ ಸಮೀಕ್ಷೆಯನ್ನು ಪೂರ್ಣಗೊಳಿಸಲು ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಸಮೀಕ್ಷೆ ಪೂರ್ಣವಾಗಲು ವಿಳಂಬ ಆಗಬಹುದು. ಕೂಡಲೇ ಸಾಫ್ಟ್‌ವೇರ್‌ನಲ್ಲಿನ ದೋಷವನ್ನು ಸರಿಪಡಿಸಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ದಶರಥ ಕಲಗುರ್ತಿ, ರಮೇಶ ವಾಡೇಕರ್, ರಂಜೀತ್ ಮೂಲಿಮನಿ, ಮಂಜುನಾಥ ನಾಲವಾರಕರ್, ಶ್ರೀನಿವಾಸ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.