ADVERTISEMENT

ಗೋರಿಯೊಳಗೆ ಹೃದಯ ಬಡಿತದ ಸದ್ದು! ಜನರಲ್ಲಿ ಆತಂಕ, ವಿಶೇಷ ಪೂಜೆಗೆ ನಿರ್ಧಾರ

ಹೃದಯದ ಬಡಿತದಂತೆ ಕಂಡುಬರುತ್ತಿದೆ ಲಾಲ್ ಅಹ್ಮದ್ ಮುತ್ಯಾನ ಗೋರಿ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 8:25 IST
Last Updated 4 ನವೆಂಬರ್ 2019, 8:25 IST
ಕಾಳಗಿ ಪಟ್ಟಣದ ಲಾಲ್ ಅಹ್ಮದ್ ಮುತ್ಯಾ ದರ್ಗಾದಲ್ಲಿ ಭಾನುವಾರ ಸ್ಥಳೀಯರು ಸಭೆ ನಡೆಸಿದರು
ಕಾಳಗಿ ಪಟ್ಟಣದ ಲಾಲ್ ಅಹ್ಮದ್ ಮುತ್ಯಾ ದರ್ಗಾದಲ್ಲಿ ಭಾನುವಾರ ಸ್ಥಳೀಯರು ಸಭೆ ನಡೆಸಿದರು   

ಕಾಳಗಿ (ಕಲಬುರ್ಗಿ ಜಿಲ್ಲೆ): ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ ಲಾಲ್ ಅಹಮದ್ ಮುತ್ಯಾನ ದರ್ಗಾದ ಗೋರಿಯು ಮಲಗಿದ್ದ ವ್ಯಕ್ತಿಯ ಹೃದಯದಂತೆ ಬಡಿದುಕೊಳ್ಳುತ್ತಿದ್ದು, ಜನರು ಆಶ್ಚರ್ಯ ವ್ಯಕ್ತಪಪಡಿಸುತ್ತಿದ್ದಾರೆ.

ಕಳೆದ ದೀಪಾವಳಿ ಅಮಾವಾಸ್ಯೆಯಿಂದ (ಅ.28) ನಡೆಯುತ್ತಿರುವ ಪ್ರಕ್ರಿಯೆಯನ್ನು ನೋಡಲು ಜನ ದರ್ಗಾಕ್ಕೆ ಹರಿದು ಬರುತ್ತಿದ್ದಾರೆ. ಅದರಲ್ಲೂ ಈ ಘಟನೆ ರಾತ್ರಿ ಹೊತ್ತು ಹೆಚ್ಚಾಗಿ ಕಾಣಿಸುತ್ತಿದೆ. ಇದು ವಿಚಿತ್ರವಾದರೂ ಸತ್ಯ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ರೀತಿ ನಡೆಯುತ್ತಿರುವುದು ಅನುಮಾನ ಬಂದು ಗೋರಿಗೆ ಹೊದಿಸಿದ್ದ ಬಟ್ಟೆ, ಹೂವಿನ ಹಾರ ತೆಗೆದು ನೋಡಲಾಗಿದೆ. ಆಗಲೂ ಬಡಿತ ಮುಂದುವರಿದಿತ್ತು’ ಎಂದು ಲಾಲ್ ಅಹ್ಮದ್ ಮುತ್ಯಾನ ಮೊಮ್ಮಗ ಸಾದಿಕ್ ಮಿಯಾ ಹೇಳಿದರು.

ADVERTISEMENT

‘ಹೈದರ್ ಸಾಬ ಎಂಬುವರ ಮೈಯಲ್ಲಿ ಲಾಲ್ ಅಹಮದ್ ಮುತ್ಯಾನ ಸವಾರಿ ಬರುತ್ತಿದ್ದು, ಊರಿನ ಒಳತಿಗಾಗಿ ಒಂದು ತಿಂಗಳೊಳಗೆ ಊರಿನ ಎಲ್ಲ ದೇವರುಗಳಿಗೆ ನೈವೇದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸುವಂತೆ ಹೇಳಿದ್ದಾರೆ. ದರ್ಗಾದ ಮುಂಭಾಗದಲ್ಲಿ ಬಂದ್ ಮಾಡಿರುವ ಹಳೆಯ ಕಾಲುದಾರಿಯನ್ನು ಸುಗಮಗೊಳಿಸುವಂತೆ ಹೈದರ್ ಸಾಬ ನುಡಿದಿದ್ದಾರೆ’ ಎಂದು ಸಾದಿಕಮಿಯಾ ಗಾಡಿವಾನ, ಮುನೀರಬೇಗ ಬಿಜಾಪುರ, ಜಾವೋದ್ದಿನ ಸೌದಾಗರ ತಿಳಿಸಿದರು.

ಲಾಲ್ ಅಹ್ಮದ್ ಮುತ್ಯಾ ಯಾರು?

ಲಾಲ್ ಅಹ್ಮದ್ ಮುತ್ಯಾ ಎಂಬುವರು ಸ್ಥಳೀಯ ಸಾಮಾನ್ಯ ನಿವಾಸಿಯಾಗಿ ಎಂಟು ದಶಕಗಳ ಕಾಲ ಬಾಳಿ ಬದುಕಿ, 44 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಸಮಾಧಿಯೇ ಈ ಗೋರಿ. ಅವರ ಜೀವಿತಾವಧಿಯಲ್ಲಿ ಪತ್ನಿ, ಮಕ್ಕಳು, ಬಂಧು ಬಳಗ ಹೀಗೆ ಎಲ್ಲವನ್ನೂ ಕಂಡಿದ್ದಾರೆ.

ಸಂಸಾರವಂತರಾಗಿದ್ದರೂ ಸಂತರಾಗಿ, ಪವಾಡಪುರುಷರಾಗಿ ಮೆರೆದಿದ್ದರು. ಬದುಕಿದ್ದಷ್ಟು ದಿನ ಊರ ಜನ-ಜಾನುವಾರುಗಳ ನೋವು, ನಲಿವುಗಳಿಗೆ ಸ್ಪಂದಿಸಿ, ಪರಿಹರಿಸುವ ಸಾಕ್ಷಾತ್ ದೇವತಾ ಮನುಷ್ಯರಾಗಿದ್ದರು. ಯಾವತ್ತೂ ಒಳ್ಳೆಯದನ್ನೇ ಬಯಸುತ್ತಿದ್ದ ಸರಳ, ಸಜ್ಜನಿಕೆಯ ವ್ಯಕ್ತಿ ಅವರಾಗಿದ್ದರು.

ಮುಖಂಡರ ಸಭೆ: ಮುತ್ಯಾನ ಗೋರಿಯ ಈ ರೀತಿಯ ಲಕ್ಷಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಎಲ್ಲ ಜಾತಿ, ಜನಾಂಗದ ಮುಖಂಡರು ಭಾನುವಾರ ದರ್ಗಾಕ್ಕೆ ಬಂದು, ಗೋರಿಯ ದರ್ಶನ ಪಡೆದು ಸಭೆ ನಡೆಸಿದರು. ಬರುವ ಚಟ್ಟಿ ಅಮಾವಾಸ್ಯೆ ಒಳಗಡೆ ಗ್ರಾಮಸ್ಥರು ಎಲ್ಲರೂ ಸೇರಿ ಊರಿನ ಎಲ್ಲ ದೇವತೆಗಳಿಗೆ ನೈವೇದ್ಯ, ವಿಶೇಷ ಪೂಜೆ ಸಲ್ಲಿಸಿ ಲಾಲ್ ಅಹ್ಮದ್ ಮುತ್ಯಾನ ಇಚ್ಛೆ ಈಡೇರಿಸಲು ನಿರ್ಣಯಿಸಿದರು.

ಶರಣಗೌಡ ಪೊಲೀಸ್ ಪಾಟೀಲ್, ಸುಭಾಷ ಕದಂ, ರವಿದಾಸ ಪತಂಗೆ, ರಾಘವೇಂದ್ರ ಗುತ್ತೇದಾರ, ಪರಮೇಶ್ವರ ಮಡಿವಾಳ, ಸೋಮಶೇಖರ ಮಾಕಪನೋರ, ಖಾಜಾಸಾಬ ಮಾಸ್ತರ ಮಾತನಾಡಿ ಲಾಲ್ ಅಹ್ಮದ್ ಮುತ್ಯಾನ ಮಹಿಮೆಯನ್ನು ಕೊಂಡಾಡಿದರು.

ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ಪ್ರಕಾಶ ಸೇಗಾಂವಕರ್, ಸತ್ಯನಾರಾಯಣ ವನಮಾಲಿ, ಚಂದ್ರಕಾಂತ ವನಮಾಲಿ, ಅಸ್ಲಂಬೇಗ ಬಿಜಾಪುರ, ಸಂತೋಷ ನರನಾಳ, ಬಾಬು ಹೀರಾಪುರ, ನಿಂಗಯ್ಯ ಗುತ್ತೇದಾರ, ರವಿ ರಜಪೂತ, ಹೀರಾಲಾಲ ಸಾಬನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.