ADVERTISEMENT

ಹೊನ್ನಕಿರಣಗಿ ಜಮೀನು, ಜೇವರ್ಗಿಯಲ್ಲಿ ಮನೆ ಹಾನಿ ವೀಕ್ಷಣೆ

ಕೇಂದ್ರ ಅಧ್ಯಯನ ತಂಡದಿಂದ ಬೆಳೆ ಹಾನಿ ಪರಿಶೀಲನೆ; ಜಿಲ್ಲಾಧಿಕಾರಿಯಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 8:27 IST
Last Updated 8 ಸೆಪ್ಟೆಂಬರ್ 2022, 8:27 IST
ಅತಿವೃಷ್ಟಿ ಕುರಿತ ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಮನೋಹರನ್ ಅವರು ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಮಳೆಯಿಂದ ಬೆಳೆ ಹಾಳಾದ ಬಗ್ಗೆ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ತಹಶೀಲ್ದಾರ ಪ್ರಕಾಶ ಕುದರಿ ಇದ್ದರು
ಅತಿವೃಷ್ಟಿ ಕುರಿತ ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಮನೋಹರನ್ ಅವರು ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಮಳೆಯಿಂದ ಬೆಳೆ ಹಾಳಾದ ಬಗ್ಗೆ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ತಹಶೀಲ್ದಾರ ಪ್ರಕಾಶ ಕುದರಿ ಇದ್ದರು   

ಕಲಬುರಗಿ: ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ಆಂತರಿಕ‌ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿತು.

ಕಳೆದ‌ ಜುಲೈ, ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ‌ ಮಳೆಯಿಂದ ಹಾಳಾದ‌ ಬೆಳೆ‌ಗಳ ವೀಕ್ಷಣೆಗೆ ತಂಡ ಆಗಮಿಸಿತ್ತು. ತಂಡದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಶೇಷಾಧಿಕಾರಿ ಎಸ್.ಜಗದೀಶ ಜೊತೆಯಲ್ಲಿದ್ದರು.

ಹೊನ್ನ‌ಕಿರಣಗಿಗೆ ಭೇಟಿ ನೀಡಿದ ತಂಡ ಗ್ರಾಮದ ರೈತ ಮಹಿಳೆ ರಸೂಲ್ ಬಿ. ಅವರ 1.30 ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೊಗರಿ ಬೆಳೆ ವೀಕ್ಷಿಸಿದರು. ಸ್ಥಳದಲ್ಲಿದ ಕೃಷಿ ಅಧಿಕಾರಿಗಳಿಂದ ಗ್ರಾಮದಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಹಾನಿಯ ಪ್ರಮಾಣದ‌ ಬಗ್ಗೆ ಮಾಹಿತಿ ಪಡೆದರು.

ADVERTISEMENT

ಪ್ರಭಾರ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಸಹಾಯಕ ಕೃಷಿ‌ ನಿರ್ದೇಶಕ ಚಂದ್ರಕಾಂತ ಜೀವಣಗಿ ಮಾಹಿತಿ ನೀಡಿ, ‘ಗ್ರಾಮದಲ್ಲಿ 3,291 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಹತ್ತಿ, ಕಡಲೆ ಬೆಳೆಯಲಾಗಿತ್ತು. ಇದರಲ್ಲಿ 680 ಹೆಕ್ಟೇರ್ ಪ್ರದೇಶ ಹಾಳಾಗಿದೆ. 350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿಯಲ್ಲಿ 50 ಹೆಕ್ಟೇರ್ ಹಾನಿಯಾಗಿದೆ. 1,481 ರೈತರ‌ ಹೊಲಕ್ಕೆ ನೀರು ಹೊಕ್ಕು ಬೆಳೆ‌ ನಾಶವಾಗಿದೆ. ಇಲ್ಲಿ ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಬಾರಿ ಬಿತ್ತನೆಗೆ ಪ್ರತಿ ಎಕರೆಗೆ ₹ 4ರಿಂದ ₹ 5 ಸಾವಿರ ವ್ಯಯ ಮಾಡಿದ್ದಾರೆ’ ಎಂದರು.

ನಂತರ ಇದೇ ಗ್ರಾಮದ ವಿನೋದ ಬಸನಾಳಕರ್ ಅವರ 10 ಎಕರೆ‌ ಪ್ರದೇಶದಲ್ಲಿ ಬೆಳೆದ ಹಾನಿಯಾದ ತೊಗರಿ ಬೆಳೆ ವೀಕ್ಷಿಸಿದರು. ರೈತ ವಿನೋದ‌ ಬಸನಾಳಕರ್ ಮಾತನಾಡಿ, ಶೇ 80ರಷ್ಟು ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡುವ ಕಾಲಾವಧಿಯನ್ನು ವಿಸ್ತರಿಬೇಕು ಎಂದು‌ ಮನವಿ ಮಾಡಿದರು.

‘ನಂತರ ತಂಡವು ಜೇವರ್ಗಿ ಪಟ್ಟಣದಲ್ಲಿ ಮಳೆಯಿಂದ ಭಾಗಶಃ ಹಾನಿಯಾದ ಮಲ್ಲಿಕಾರ್ಜುನ ಡೂಗನಕರ್, ಧರ್ಮಣ್ಣಾ, ಮರೆಮ್ಮ ಕಾಳಪ್ಪ ಅವರ ಮನೆ ವೀಕ್ಷಿಸಿತು. ಜೇವರ್ಗಿ ತಾಲೂಕಿನ ಪ್ರಭಾರ ತಹಶೀಲ್ದಾರ್ ಸಂಜೀವಕುಮಾರ ದಾಸರ್ ಅವರು ಜೇವರ್ಗಿ ಪಟ್ಟಣದಲ್ಲಿ 4 ಸೇರಿ ತಾಲೂಕಿನಾದ್ಯಂತ 160 ಮನೆ ಹಾನಿಗೊಳಗಾಗಿವೆ. ಭಾಗಶಃ ಹಾನಿಯಾದ‌ ಮನೆಗಳಿಗೆ ತಕ್ಷಣ ₹ 10 ಸಾವಿರ ತದನಂತರ ₹ 40 ಸಾವಿರ ಸೇರಿ ಒಟ್ಟು ₹ 50 ಸಾವಿರ ಪರಿಹಾರ ನೀಡಲಾಗಿದೆ’ ಎಂದರು.

₹ 30.79 ಕೋಟಿ ಪರಿಹಾರ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ‘ಆಗಸ್ಟ್ ತಿಂಗಳ ಮೊದಲ 10 ದಿನದಲ್ಲಿ ಹೆಚ್ಚಿನ‌ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ 1,11,400 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. 805 ಮನೆಗಳು ಮಳೆಗೆ ತುತ್ತಾಗಿದ್ದು, 6 ಜನರು ಮಳೆ ಸಂಬಂಧಿ ಅವಘಡಗಳಿಂದಾಗಿ ಪ್ರಸ್ತುತ ಬೆಳೆ ಹಾನಿ ಪರಿಹಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬುಧವಾರ 33,487 ರೈತರಿಗೆ ₹ 30.79 ಕೋಟಿ ಮೊದಲನೇ ಕಂತಿನ ರೂಪದಲ್ಲಿ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮೆ‌ ಮಾಡಲಾಗಿದೆ’ ಎಂದರು.

ಕಲಬುರಗಿ ತಹಶೀಲ್ದಾರ್ ಪ್ರಕಾಶ ಕುದರಿ ಸೇರಿದಂತೆ ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು. ನಂತರ ತಂಡವು ವಿಜಯಪುರ ಜಿಲ್ಲೆಗೆ ಪ್ರಯಾಣಿಸಿತು.

ಇದಕ್ಕೂ ಮುನ್ನ ಕಲಬುರಗಿಯ ಐವಾನ ಇ ಶಾಹಿ ಅತಿಥಿಗೃಹದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರದ ತಂಡವು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಬೆಳೆ ಹಾನಿ, ಮಾನವ–ಪ್ರಾಣಿ ಹಾನಿ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.