ADVERTISEMENT

‘ತಂದೆ ಮುಖ್ಯಮಂತ್ರಿ ಆಗುವುದು ತಪ್ಪಿಸಿದ ಪ್ರಿಯಾಂಕ್’

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 7:53 IST
Last Updated 13 ಜೂನ್ 2022, 7:53 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಕಲಬುರಗಿ: ‘ಪ್ರಿಯಾಂಕ್ ಖರ್ಗೆ ಸಚಿವರಾಗಬೇಕು ಎಂಬ ಆಸೆಯಿಂದ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು. ದಲಿತರೊಬ್ಬರು ಮುಖ್ಯಮಂತ್ರಿ ಆಗುವುದು ತಪ್ಪಿಸಿದ್ದು ಪ್ರಿಯಾಂಕ್’ ಎಂದು ವಿಧಾನಪರಿಷತ್ ಸದಸ್ಯ, ಬಿಜೆ‍‍ಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ತಂದೆ ಹೆಸರಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದು, ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗ ಪ್ರಿಯಾಂಕ್ ಜನಿಸಿರಲಿಲ್ಲ. ನನ್ನನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ಕಾಂಗ್ರೆಸ್‌ನವರಿಗೆ ಪ್ರಧಾನ ಮಂತ್ರಿ ಹುದ್ದೆಯ ಘನತೆ ತಿಳಿದಿಲ್ಲ. ನಾವು ಕಳಿಸಿರುವ ಚಡ್ಡಿಗಳನ್ನು ಪ್ರಧಾನಿಗಳಿಗೆ ಕಳುಹಿಸುತ್ತಾರಂತೆ. ಪ್ರಧಾನಿಗೇಕೆ ಕಳುಹಿಸುತ್ತೀರಿ. ಅವುಗಳನ್ನು ತೊಡುವುದೇ ಬಿಡಿ, ಆಗ ಅದರ ಮಹತ್ವದ ಅರಿವಾಗುತ್ತದೆ’ ಎಂದು ಸವಾಲು ಹಾಕಿದರು.

ADVERTISEMENT

‘ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಧ್ರುವನಾರಾಯಣ, ಶ್ರೀನಿವಾಸ ಪ್ರಸಾದ, ಆಂಜನೇಯ ಅವರನ್ನು ಮೂಲೆಗುಂಪು ಮಾಡಿದ್ದು ಸಿದ್ದರಾಮಯ್ಯ. ಕಾಂಗ್ರೆಸ್‌ವರು ಪ್ರಧಾನ ಮಂತ್ರಿಯ ಹುದ್ದೆಯ ಗೌರವವನ್ನು ತಿಳಿದಿಲ್ಲ. ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯಕ್ರಿಯೆಗೆ ಸ್ಥಳ ನೀಡದೆ ಅವಮಾನಿಸಿದ್ದು ಕಾಂಗ್ರೆಸ್’ ಎಂದು ಆಕ್ಷೇಪಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಶಾಮರಾವ ಪ್ಯಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.