ಕಾಳಗಿ: ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ ದೇವಸ್ಥಾನ ಆಡಳಿತದ ನಿರ್ಲಕ್ಷ್ಯದಿಂದ ಭಕ್ತರು ಸೋಮವಾರ ಪರದಾಡಿದರು.
ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಈ ದೇವಸ್ಥಾನಕ್ಕೆ ರಾಜ್ಯ, ಹೊರರಾಜ್ಯದ ಲಕ್ಷಾಂತರ ಭಕ್ತರು ಬರುತ್ತಾರೆ. ಹಲವರಿಗೆ ಇದು ಮನೆಯ ದೇವರು. ಹೀಗಾಗಿ ಅಪಾರ ಭಕ್ತರು ಹರಕೆ ಸಲ್ಲಿಸಲು ಇಲ್ಲಿಗೆ ಬರುವುದು ವಾಡಿಕೆ. ವಿಶೇಷವಾಗಿ ಭಾನುವಾರ ರಾತ್ರಿ ಮತ್ತು ಸೋಮವಾರ ಭಕ್ತರ ಸಂಖ್ಯೆ ತುಸು ಹೆಚ್ಚು.
ಭಾನುವಾರ ಕೈಕೊಟ್ಟ ವಿದ್ಯುತ್ ಸೋಮವಾರವೂ ಬಂದಿರಲಿಲ್ಲ. ದೇವಸ್ಥಾನದಲ್ಲಿ ಇದ್ದ ಜನರೇಟರ್ ಅಥವಾ ಯುಪಿಎಸ್ ಚಾಲು ಮಾಡುವವರಿಲ್ಲದೇ ಅರ್ಚಕರು ಕತ್ತಲೆಯಲ್ಲೇ ದೀಪಹಚ್ಚಿ ರೇವಣಸಿದ್ದೇಶ್ವರ ಪೂಜೆ ಮಾಡಿದ್ದಾರೆ.
ಜಂಗಮರಿಗೆ ಉಣಬಡಿಸಲು, ಜವಳ, ಹರಕೆ ತೀರಿಸುವುದು ಮತ್ತಿತರ ಮಂಗಲ ಕಾರ್ಯಕ್ರಮಗಳ ಅಂಗವಾಗಿ ಸಿದ್ಧತೆಗಾಗಿ ಭಕ್ತರು ಎಂದಿನಂತೆ ಭಾನುವಾರ ರಾತ್ರಿಯೇ ಬಂದಿಳಿದ್ದರು. ಆದರೆ, ಅವರೆಲ್ಲ ಸೌಲಭ್ಯ ಸಿಗದೇ ಪರದಾಡಿದರು.
‘ಸೋಮವಾರ ಬೆಳಿಗ್ಗೆ ನೈವೇದ್ಯ, ಅಡುಗೆಯ ಜೊತೆಗೆ ಕುಡಿಯಲು ನಳಗಳಲ್ಲಿ ನೀರಿಲ್ಲದೆ ತೊಂದರೆಯಾಯಿತು. ಗುಡ್ಡದಿಂದ ಕೆಳಗೆ ಹೋಗಿ ನೀರು ತರುವಂತಾಯಿತು’ ಎಂದು ಭಕ್ತರು ಅಳಲು ತೋಡಿಕೊಂಡರು.
‘ಅಡುಗೆ ಸ್ಥಳದಲ್ಲಿ ಶುಚಿತ್ವ ಮರೀಚಿಕೆಯಾಗಿದೆ. ದೇಣಿಗೆ ಕೌಂಟರ್ ಒಳಗೆ ರಸೀದಿ ಕೊಡಲಿಕ್ಕೂ ಜನರಿಲ್ಲ. ಗೋಶಾಲೆಯ ಸಿಬ್ಬಂದಿಯೇ ಬಂದು ರಸೀದಿ ನೀಡುವಂತಾಯಿತು. ಗರ್ಭಗುಡಿಯಲ್ಲಿ ಪೂಜೆಗೆ ಮೀಸಲು ನೀರಿಲ್ಲದೇ ಭಕ್ತರು ಹೊರಗಿನ ನೀರು ಬಳಸಿದ್ದಾರೆ. ಅಡುಗೆ ಮಾಡುವುದಕ್ಕೆ ಸಮಯಕ್ಕೆ ಸರಿಯಾಗಿ ಬಾಂಡೆ ಕೊಡುವರು ಇಲ್ಲದೇ ಅಡುಗೆ ಸಿದ್ಧಪಡಿಸುವುದು ತಡವಾಯಿತು’ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
‘ದೇವಸ್ಥಾನದ ಕೆಲಸಕ್ಕೆ ಸರಿಯಾದ ಸಿಬ್ಬಂದಿಯೇ ಇಲ್ಲ. ಇದರಿಂದ ದೂರದ ಊರುಗಳಿಂದ ಬರುವವರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಸೇಡಂ ಉಪವಿಭಾಗಾಧಿಕಾರಿ ಕೂಡಲೇ ಕ್ರಮಕೈಗೊಳ್ಳಬೇಕು. ಭಕ್ತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಭಕ್ತರಾದ ಶಿವರಾಜ ಪಾಟೀಲ, ಶರಣಬಸಪ್ಪ ಮಮಶೆಟ್ಟಿ, ವೀರಣ್ಣ ಗಂಗಾಣಿ ಮತ್ತಿತರರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.