ADVERTISEMENT

ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಹೆರಿಗೆ: ನರ್ಸ್‌ಗೆ ಮೆಚ್ಚುಗೆ

ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಶೋಕಾಸ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:02 IST
Last Updated 12 ನವೆಂಬರ್ 2020, 19:02 IST
ನಾಗೇಶ್ವರಿ ಎಂ. ಬೆನ್ನೂರಕರ್‌
ನಾಗೇಶ್ವರಿ ಎಂ. ಬೆನ್ನೂರಕರ್‌   

ಕಲಬುರ್ಗಿ: ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಸುಕಿನಲ್ಲಿ ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಯಶಸ್ವಿ ಹೆರಿಗೆ ಮಾಡಿಸಿದ ಸ್ಟಾಫ್‌ನರ್ಸ್‌ ಅವರಿಗೆ ಈಗ ಎಲ್ಲರಿಂದ ಅಭಿನಂದನೆಗಳು ಹರಿದು ಬರುತ್ತಿವೆ. ಸ್ವತಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಅವರೂ ನರ್ಸ್‌ ಧೈರ್ಯ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿದ್ದಾರೆ.

ಮಂಗಳವಾರ ರಾತ್ರಿ 10ರ ಸುಮಾರಿಗೆ ಕೊಲ್ಲೂರು ಗ್ರಾಮದ ಸಿದ್ಧಮ್ಮ ಹನುಮಂತಪ್ಪ ಎಂಬ ಗರ್ಭಿಣಿಗೆ ಹರಿಗೆ ನೋವು ಕಾಣಿಸಿಕೊಂಡಿತು. ಸಂಬಂಧಿಕರು ಅವರನ್ನು ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಹೆರಿಗೆ ನೋವು ಹೆಚ್ಚಾಗಿದ್ದರಿಂದ ಸ್ಟಾಫ್‌ನರ್ಸ್‌ ನಾಗೇಶ್ವರಿ ಎಂ. ಬೆನ್ನೂರಕರ್‌ ಅವರೇ ಹೆರಿಗೆ ಮಾಡಿಸಲು ಮುಂದಾದರು. ಆದರೆ, 11 ಗಂಟೆ ಸುಮಾರಿಗೆ ವಿದ್ಯುತ್‌ ಕಡಿತಗೊಂಡು, ಇಡೀ ಆಸ್ಪತ್ರೆಗೆ ಕತ್ತಲಾವರಿಸಿತು. ಆಸ್ಪತ್ರೆಯಲ್ಲಿನ ಇನ್ವರ್ಟರ್‌ ಕೂಡ ಕೈಕೊಟ್ಟಿತು. ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಎರಡು ತಾಸು ಕಾದರೂ ವಿದ್ಯುತ್‌ ಮತ್ತೆ ಬರಲಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಎದೆಗುಂದದ ನಾಗೇಶ್ವರಿ ಅವರು, ತಾವೇ ಹೆರಿಗೆ ಮಾಡಿಸಲು ವ್ಯವಸ್ಥೆ ಮಾಡಿಕೊಂಡರು.

ನಾಲ್ಕು ಜನರ ಮೊಬೈಲ್‌ಗಳಿಂದ ಟಾರ್ಚ್‌ನ ಬೆಳಕು ಬಿಟ್ಟು ಅದರ ಸಹಾಯದಿಂದ ಹೆರಿಗೆ ಮಾಡಿಸಿದರು. ಸಿದ್ದಮ್ಮ ಅವರು ನಸುಕಿನ 4 ಗಂಟೆ ಸುಮಾರಿಗೆ ಗಂಡುಮಗುವಿಗೆ ಜನ್ಮ ನೀಡಿದರು. ಸಹಜ (ನಾರ್ಮಲ್‌) ಹೆರಿಗೆ ಆಗುದ್ದು, ಬಾಣಂತಿ ಹಾಗೂ ಹಸುಳೆ ಇಬ್ಬರೂ ಸುರಕ್ಷಿತವಾಗಿದ್ದಾರೆ. ಗುರುವಾರ ಬೆಳಿಗ್ಗೆಯೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ADVERTISEMENT

‘ಹೆರಿಗೆ ಸಂದರ್ಭದಲ್ಲಿ ವಿದ್ಯುತ್‌ ಎಷ್ಟು ಮಹತ್ವ ಪಡೆಯುತ್ತದೆ ಎಂದು ನನಗೆ ಅರ್ಥವಿದೆ. ವಿದ್ಯುತ್‌ ಕೈಕೊಟ್ಟರೂ ಅಂಥ ಸಂದಿಗ್ಧ ಸ್ಥಿತಿಯಲ್ಲೂ ಎದೆಗಂದದ ಸ್ಟಾಫ್‌ನರ್ಸ್‌ ನಾಗೇಶ್ವರಿ ಅವರನ್ನು ಅಭಿನಂದಿಸುತ್ತೇನೆ’ ಎಂದು ಡಾ.ರಾಜಶೇಖರ ಮಾಲಿ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚುವರಿ ಇನ್ವರ್ಟ್‌ ವ್ಯವಸ್ಥೆ: ಡಿಎಚ್‌ಒ

ಕಲಬುರ್ಗಿ: ‘ರಾತ್ರಿ ಹೆರಿಗೆಗೆ ತೊಂದರೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೂ ತಾಕೀತು ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಇನ್ವರ್ಟರ್‌, ಜನರೇಟರ್‌ ಇರಲಿ ಬಿಡಲಿ; ಹೆರಿಗೆ ಕೋಣೆಗಾಗಿಯೇ ಒಂದು ಪ್ರ‌ತ್ಯೇಕ ಇನ್ವರ್ಟರ್‌ ಇಟ್ಟುಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದ್ದೇನೆ. ಎಲ್ಲಿ ಅಗತ್ಯವಿದೆಯೋ ಅಲ್ಲಿಗೆ ಹೆಚ್ಚುವರಿ ಸಲಕರಣೆ ಮಂಜೂರು ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ವಾಲಿ ತಿಳಿಸಿದ್ದಾರೆ.

‘ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸಂದರ್ಭ ವಿದ್ಯುತ್‌ ಕೈ ಕೊಟ್ಟಿದ್ದು ಹಾಗೂ ವೈದ್ಯಾಧಿಕಾರಿ ಸ್ಥಳದಲ್ಲಿ ಇಲ್ಲದ ವಿಷಯವಾಗಿ ಬುಧವಾರವೇ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ನೀಡಿದ್ದೇನೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ವಿದ್ಯುತ್‌ ವ್ಯವಸ್ಥೆಯನ್ನು ಪದೇಪದೇ ಪರಿಶೀಲಿಸಿಕೊಳ್ಳಬೇಕು, ಹೆಚ್ಚುವರಿ ಇನ್ವರ್ಟರ್‌ ಇಟ್ಟುಕೊಳ್ಳಬೇಕೆಂದು ಆದೇಶ ಹೊರಡಿಸಿದ್ದೇನೆ’ ಎಂದರು.

* ನಾವೆಲ್ಲ ಇನ್ನೂ ಗುತ್ತಿಗೆ ನೌಕರರಾಗಿಯೇ ದುಡಿಯುತ್ತಿದ್ದೇವೆ. ಕರ್ತವ್ಯಕ್ಕೆ ಯಾವತ್ತೂ ಕುಂದು ಬರದಂತೆ ನೋಡಿಕೊಳ್ಳುತ್ತಿದ್ದೇವೆ. ಆದರೂ ಸರ್ಕಾರ ನಮ್ಮ ಸೇವೆಯನ್ನು ಇನ್ನೂ ಕಾಯಂ ಮಾಡಿಲ್ಲ. ಕಾಯಮಾತಿ ಒಂದೇ ನಮ್ಮ ಬೇಡಿಕೆ.

–ನಾಗೇಶ್ವರಿ ಎಂ. ಬೆನ್ನೂರಕರ್‌, ಸ್ಟಾಫ್‌ ನರ್ಸ್‌, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.