ADVERTISEMENT

ಕಲಬುರಗಿ | ಬಾಲ್ಯ ವಿವಾಹ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:47 IST
Last Updated 29 ಅಕ್ಟೋಬರ್ 2025, 6:47 IST
<div class="paragraphs"><p>ಬಾಲ್ಯ ವಿವಾಹ</p></div>

ಬಾಲ್ಯ ವಿವಾಹ

   

(ಸಾಂದರ್ಭಿಕ ಚಿತ್ರ)

ಕಲಬುರಗಿ: ಬಾಲ್ಯ ವಿವಾಹ ನಡೆದ ಆರು ತಿಂಗಳ ಬಳಿಕ ಮದುವೆಯಾದ ಯುವಕ, ಆತನ ಪೋಷಕರು ಹಾಗೂ ಬಾಲಕಿಯ ಪೋಷಕರ ವಿರುದ್ಧ ನಗರದ ಸಬರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ 16 ವರ್ಷದ ಬಾಲಕಿಯನ್ನು ಕಲಬುರಗಿಯ ರಾಮತೀರ್ಥ ಪ್ರದೇಶದ ಅಯೋಧ್ಯೆ ನಗರದ ಯುವಕನೊಂದಿಗೆ 2025ರ ಮಾರ್ಚ್ 27ರಂದು ಮದುವೆ ಮಾಡಲಾಗಿತ್ತು. ಈ ಸಂಬಂಧ 2025ರ ಏಪ್ರಿಲ್‌ 4ರಂದು ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು’ ಎಂದು ದೂರಿನಲ್ಲಿ ಕಲಬುರಗಿ ಸಿಡಿಪಿಒ ತಿಳಿಸಿದ್ದಾರೆ.

‘ಅದರಂತೆ ಏಪ್ರಿಲ್‌ 8ರಂದು ಅಧಿಕಾರಿಗಳು ದಾಳಿ ನಡೆಸಿ ವರನ ಗೃಹದಿಂದ ಬಾಲಕಿಯನ್ನು ರಕ್ಷಿಸಿ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಬಾಲಕಿ ಕುರಿತು ಸಾಮಾಜಿಕ ತನಿಖಾ ವರದಿ ನಡೆಸಲಾಗಿತ್ತು. ಅದರಂತೆ ಇದೊಂದು ಬಾಲ್ಯವಿವಾಹ ಎಂದು ದೃಢಪಟ್ಟಿದ್ದು, ಬಾಲಕಿಯನ್ನು ಮದುವೆಯಾದ ಯುವಕ, ಆತನ ಪೋಷಕರು ಹಾಗೂ ಬಾಲಕಿಯ ಪೋಷಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ಅವರು ಕೋರಿದ್ದಾರೆ.

ವಿವಿಧೆಡೆ ಚಿನ್ನಾಭರಣ ಕಳವು

ಕಲಬುರಗಿಯ ವಿವಿಧೆಡೆ ಕೈಚಳಕ ತೋರಿರುವ ಕಳ್ಳರು ಮೂರು ಮನೆಗಳ ಕೀಲಿ ಮುರಿದು ಚಿನ್ನ–ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದಾರೆ.

ಹಳೇ ಜೇವರ್ಗಿ ರಸ್ತೆಯಲ್ಲಿ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ನಲ್ಲಿರುವ ಮನೆಯೊಂದರ ಕೀಲಿ ಮುರಿದ ಕಳ್ಳರು, ₹ 88 ಸಾವಿರ ಮೊತ್ತದ ಚಿನ್ನ–ಬೆಳ್ಳಿ ಆಭರಣ ಕದಿದ್ದಾರೆ.

ಪಿಡಬ್ಲ್ಯುಡಿ ಇಲಾಖೆ ಕಚೇರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿರುವ ರಾಹುಲದೇವ ಧನ್ನಾ ಆಭರಣ ಕಳೆದುಕೊಂಡವರು.

ಮತ್ತೊಂದೆಡೆ, ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ಲಕ್ಷ್ಮಿನಾರಾಯಣ ನಗರದಲ್ಲಿರುವ ಮನೆಯೊಂದ ಕೀಲಿ ಒಡೆದ ಕಳ್ಳರು, ₹ 1.30 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣ ಕದ್ದಿದ್ದಾರೆ.

ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ 75 ವರ್ಷದ ಶಂಕರ ಚವ್ಹಾಣ ಚಿನ್ನ–ಬೆಳ್ಳಿ ಆಭರಣ ಕಳೆದುಕೊಂಡವರು.

ಈ ಕುರಿತು ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮತ್ತೊಂದೆಡೆ, ಸ್ವರಗೇಟ್‌ ನಗರದ ಮನೆಯೊಂದರ ಅಡುಗೆ ಮನೆಯ ಬಾಗಿಲಿನ ಕೀಲಿ ಮುರಿದ ಒಳ ನುಗ್ಗಿದ ಕಳ್ಳರು ಅಲ್ಮೇರಾದಲ್ಲಿದ್ದ ₹ 1.40 ಲಕ್ಷ ಮೌಲ್ಯದ ಚಿನ್ನಾಭರಣ ಕದಿದ್ದಾರೆ.

ನಗರದ ಖಾಸಗಿ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರಶಾಂತ ಮುತ್ತಾ ಚಿನ್ನಾಭರಣ ಕಳೆದುಕೊಂಡವರು. ಈ ಕುರಿತು ಸಬರ್ಬನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.